×
Ad

ಒಂದೇ ಓವರ್‌ನಲ್ಲಿ 5 ವಿಕೆಟ್ | ಟಿ-20 ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ ಪ್ರಿಯಾಂದನ

Update: 2025-12-23 22:28 IST

ಪ್ರಿಯಾಂದನ |Photo Credit : @ajangid346/x

ಹೊಸದಿಲ್ಲಿ, ಡಿ.23: ಇಂಡೋನೇಶ್ಯದ ಕ್ರಿಕೆಟಿಗ ಗೆಡೆ ಪ್ರಿಯಾಂದನ ಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ ನಲ್ಲಿ ಐದು ವಿಕೆಟ್‌ಗಳನ್ನು ಉರುಳಿಸಿದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದ್ದಾರೆ.

ಮಂಗಳವಾರ ಬಾಲಿಯಲ್ಲಿ ನಡೆದ ಕಾಂಬೋಡಿಯಾ ತಂಡದ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು. ಪುರುಷರ ಹಾಗೂ ಮಹಿಳೆಯರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಈ ತನಕ ಯಾರೂ ಈ ಸಾಧನೆ ಮಾಡಿಲ್ಲ.

28ರ ಹರೆಯದ ಬಲಗೈ ವೇಗದ ಬೌಲರ್ ಪ್ರಿಯಾಂದನ 16ನೇ ಓವರ್‌ನಲ್ಲಿ ಈ ಸಾಧನೆ ಮಾಡಿದರು.ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ ಪ್ರಿಯಾಂದನ ಕೇವಲ 1 ರನ್ ನೀಡಿ 5 ವಿಕೆಟ್‌ ಗಳನ್ನು ಪಡೆದರು. ಕಾಂಬೋಡಿಯಾದ ಕೊನೆಯ ಐದು ವಿಕೆಟ್‌ ಗಳನ್ನು ಉರುಳಿಸಿ ಸಿಂಹಸ್ವಪ್ನರಾದರು.

ಗೆಲ್ಲಲು 168 ರನ್ ಗುರಿ ಚೇಸ್ ಮಾಡಿದ ಕಾಂಬೋಡಿಯಾ ತಂಡವು 104 ರನ್‌ಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆಗ ದಾಳಿಗಿಳಿದ ಪ್ರಿಯಾಂದನ ಅವರು ಶಾ ಅಬ್ರಾರ್ ಹುಸೇನ್, ನಿರ್ಮಲ್‌ಜಿತ್ ಸಿಂಗ್ ಹಾಗೂ ರಥನಾಕ್‌ ರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಹ್ಯಾಟ್ರಿಕ್ ಪೂರೈಸಿದರು.

ಐದನೇ ಎಸೆತದಲ್ಲಿ ರನ್ ನೀಡದ ಪ್ರಿಯಾಂದನ, ಮೊಂಗ್ದಾರ ಸೋಕ್ ಹಾಗೂ ಪೆಲ್ ವೆನ್ನಕ್‌ ರನ್ನು ಔಟ್ ಮಾಡಿ ಒಂದೇ ಓವರ್‌ ನಲ್ಲಿ ಐದು ವಿಕೆಟ್‌ಗಳನ್ನು ಪಡೆದು ಅಪರೂಪದ ಸಾಧನೆ ಮಾಡಿದರು. ಕಾಂಬೋಡಿಯಾ ಈ ಓವರ್‌ನಲ್ಲಿ ವೈಡ್ ಮೂಲಕ ಕೇವಲ ಒಂದು ರನ್ ಗಳಿಸಿತು. ಪ್ರಿಯಾಂದನ ಅವರ ಐತಿಹಾಸಿಕ ಬೌಲಿಂಗ್ ನೆರವಿನಿಂದ ಆತಿಥೇಯ ಇಂಡೋನೇಶ್ಯ ತಂಡವು ಕಾಂಬೋಡಿಯಾ ತಂಡವನ್ನು 16 ಓವರ್‌ ಗಳಲ್ಲಿ 107 ರನ್‌ಗೆ ಆಲೌಟ್ ಮಾಡಿ 60 ರನ್ ಅಂತರದಿಂದ ಜಯಶಾಲಿಯಾಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಡೋನೇಶ್ಯ ತಂಡವು ವಿಕೆಟ್‌ಕೀಪರ್-ಬ್ಯಾಟರ್ ಧರ್ಮ ಕೆಸುಮಾ ಅವರ ಶತಕದ(ಔಟಾಗದೆ 110, 68 ಎಸೆತ, 8 ಬೌಂಡರಿ,6 ಸಿಕ್ಸರ್) ಸಹಾಯದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತ್ತು. ಪ್ರಿಯಾಂದನ ಅವರು ಧರ್ಮ ಜೊತೆಗೆ ಇನಿಂಗ್ಸ್ ಆರಂಭಿಸಿದ್ದರು. ಆದರೆ ಅವರು 11 ಎಸೆತಗಳಲ್ಲಿ ಆರು ರನ್ ಗಳಿಸಿ ಔಟಾಗಿದ್ದರು.

ಶತಕವೀರ ಧರ್ಮ ಕೆಸುಮಾ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.

*ಮೈಲಿಗಲ್ಲಿನ ಸಮೀಪ ತಲುಪಿದ್ದ ಮಾಲಿಂಗ, ರಶೀದ್ ಖಾನ್

ಈ ಮೊದಲು ಹಲವು ಪ್ರಮುಖ ಬೌಲರ್‌ಗಳು ಈ ಮೈಲಿಗಲ್ಲಿನ ಸಮೀಪ ತಲುಪಿದ್ದರು. ಲಸಿತ್ ಮಾಲಿಂಗ, ರಶೀದ್ ಖಾನ್, ಕರ್ಟಿಸ್ ಕ್ಯಾಂಫರ್ ಹಾಗೂ ಜೇಸನ್ ಹೋಲ್ಡರ್ ಟಿ-20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಪ್ರತೀ ಬಾರಿ ಐದನೇ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಪ್ರಿಯಾಂದನ ತನ್ನ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿ ದಾಖಲೆ ಪುಸ್ತಕ ಸೇರಿದ್ದಾರೆ.

*ದೇಶೀಯ ಕ್ರಿಕೆಟ್‌ನಲ್ಲಿ ಎರಡು ಬಾರಿ ಸಾಧನೆ

ಪುರುಷರ ಟಿ-20 ಕ್ರಿಕೆಟ್‌ನಲ್ಲಿ ಈ ಹಿಂದೆ ಎರಡು ಬಾರಿ ಓವರ್‌ವೊಂದರಲ್ಲಿ ಐದು ವಿಕೆಟ್‌ಗಳನ್ನು ಪಡೆದ ಅಪರೂಪದ ಸಾಧನೆ ಕಂಡುಬಂದಿತ್ತು. ಈ ಎರಡು ಸಾಧನೆಯು ದೇಶೀಯ ಕ್ರಿಕೆಟ್‌ನಲ್ಲಿ ಮೂಡಿಬಂದಿತ್ತು.

2023-14ರಲ್ಲಿ ಬಾಂಗ್ಲಾದೇಶದ ವಿಕ್ಟರಿ ಡೇ ಟಿ20 ಕಪ್‌ನಲ್ಲಿ ಅಲ್ ಅಮಿನ್ ಹುಸೇನ್ ಮೊದಲ ಬಾರಿ ಈ ಸಾಧನೆ ಮಾಡಿದ್ದರು. ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್ 2019-20ರಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ಸಾಧನೆಯನ್ನು ಪುನರಾವರ್ತಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News