ಜೋಗದಲ್ಲಿ ಪಂಚತಾರಾ ಹೊಟೇಲ್ ನಿರ್ಮಾಣ: ಅವಕಾಶ ನೀಡದಂತೆ ಪರಿಸರ ವನ್ಯಜೀವಿ ಮಂಡಳಿ ಆಕ್ಷೇಪಣೆ

Update: 2021-10-20 05:20 GMT

ಶಿವಮೊಗ್ಗ , ಅ.19: ವಿಶ್ವ ವಿಖ್ಯಾತ ಜೋಗ ಜಲಪಾತದ ಹತ್ತಿರ ಪಂಚತಾರಾ ಹೊಟೇಲ್ ನಿರ್ಮಾಣಕ್ಕೆ ಅವಕಾಶ ನೀಡದಂತೆ ಪರಿಸರ ವನ್ಯ ಜೀವಿ ಮಂಡಳಿ ಆಕ್ಷೇಪಣೆ ಸಲ್ಲಿಸಿದ್ದು, ಇದರಿಂದ ಪ್ರವಾಸೋದ್ಯಮ ಇಲಾಖೆಗೆ ಹಿನ್ನಡೆಯಾಗಿದೆ.

ಜಿಲ್ಲಾಧಿಕಾರಿಯಿಂದ ಪ್ರಸ್ತಾವನೆ ಸಲ್ಲಿಕೆ? ಜೋಗ ಜಲಪಾತದ ಬಳಿ 18 ಎಕರೆ ಭೂ ಪ್ರದೇಶದಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯಿಂದ ಪಂಚತಾರ ಹೊಟೇಲ್ ನಿರ್ಮಾಣ ಸೇರಿದಂತೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಈಗಾಗಲೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಆದರೆ ಇದು ಕೇಂದ್ರ ಸರಕಾರ ಘೋಷಣೆ ಮಾಡಿರುವ ಪರಿಸರ ಸೂಕ್ಷ್ಮಪ್ರದೇಶ ಇದಾಗಿದೆ. ಹಾಗಾಗಿ ಶಿವಮೊಗ್ಗ ಜಿಲ್ಲಾಧಿಕಾರಿಯವರು ೋಗ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುವುದರಿಂದ ತಾಲೂಕಿನ ಬಾರಂಗಿ ಹೋಬಳಿ ತಳಕಳಲೆ ಗ್ರಾಮದ ಸರ್ವೇ ನಂ. 151 ರಲ್ಲಿ ಇರುವ 0.8536 ಹೆಕ್ಟೇರ್ ಭೂ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕಾಗಿ ಹಾಗೂ ಅಭಿವೃದ್ಧಿಗಾಗಿ ಬಿಡುಗಡೆ ಮಾಡುವಂತೆ ಈಗಾಗಲೆ ರಾಜ್ಯ ಅರಣ್ಯ ಇಲಾಖೆಗೆ ಪ್ರಸ್ತಾವವನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

165 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ?: ಜೋಗ ಜಲಪಾತದ ಹತ್ತಿರ ಪಂಚತಾರ ಹೊಟೇಲ್ ನಿರ್ಮಾಣ ಮಾಡುವ ಜೊತೆಗೆ ರೋಪ್ ವೇ, ಮಕ್ಕಳ ಉದ್ಯಾನವನ, ಕಾಂಪ್ಲೆಕ್ಸ್ ನಿರ್ಮಾಣ. ವೀಕ್ಷಣಾ ಗೋಪುರ. ಹ್ಯೆ ಮಾಸ್ಕ್ ಲೈಟಿಂಗ್ ವ್ಯವಸ್ಥೆ. ಸಂಪರ್ಕ ರಸ್ತೆಗಳು, ಕುಡಿಯುವ ನೀರಿನ ಸೌಲಭ್ಯ ಇನ್ನಿತರ ಅನೇಕ ಯೋಜನೆಯ ರೂಪದಲ್ಲಿ ಅಭಿವೃದ್ಧಿ ಮಾಡಲು ಒಟ್ಟು 165 ಕೋಟಿ ರೂ.ಗಳ ಅನುದಾನಕ್ಕೆ ಈಗಾಗಲೆ ಸರಕಾರ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ ಎನ್ನಲಾಗುತ್ತಿದೆ.

ಯಾವ ಯಾವ ಇಲಾಖೆ ಶಿಫಾರಸ್ಸು ಮಾಡಿದ್ದಾರೆ?: ಈಗಾಗಲೆ ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಅನುಮೋದಿಸಿ ಸಾಗರ ಉಪ ಅರಣ್ಯ ಸಂರಕ್ಷಾಣಾಧಿಕಾರಿಗಳು, ಶಿವಮೊಗ್ಗ ಮುಖ್ಯ ಅರಣ್ಯಸಂರಕ್ಷಣಾಧಿಕಾರಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅವರು ಶಿಪಾರಸ್ಸು ಮಾಡಿ ರಾಜ್ಯ ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಿದೆ.ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಅಡಿಯಲ್ಲಿ ಕೇಂದ್ರ ಸರಕಾರದ ಅನುಮೋದನೆಯನ್ನು ಪಡೆಯಲು ಕೇಂದ್ರ ಪರಿಸರ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಅನುಮೋದನೆ ಪಡೆಯಲು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವನ್ಯಜೀವಿ ಕಾರ್ಯಕರ್ತರಿಂದ ಸರಕಾರಕ್ಕೆ ಲಿಖಿತ ಆಕ್ಷೇಪಣೆ: ಜೋಗ ಜಲಪಾತದ ಸುತ್ತಾಮುತ್ತ ಪ್ರದೇಶವು ಶರಾವತಿ ಸಿಂಗಳೀಕ ಅಭಯಾರಣ್ಯ ಹಾಗೂ ಪರಿಸರ ಸೂಕ್ಷ್ಮಪ್ರದೇಶ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ಪಂಚತಾರ ಹೊಟೇಲ್ ಹಾಗೂ ಇನ್ನಿತರ ಅಭಿವೃದ್ಧಿ ಯೋಜನೆಗಳು ಪರಿಸರಕ್ಕೆ ಮಾರಕವಾಗಿರುತ್ತದೆ. ಇಂತಹ ಯೋಜನೆಯನ್ನು ಸರಕಾರ ಕೈಬಿಡಬೇಕೆಂದು ವನ್ಯ ಜೀವಿ ಮಂಡಳಿಯ ಕಾರ್ಯಕರ್ತ ಗಿರಿಧರ್ ಕುಲಕರ್ಣಿ ಅವರು, ಅರಣ್ಯ ಪರಿಸರ ಜೀವಿಶಾಸ್ತ್ರಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಕರ್ನಾಟಕ ಜೀವ ವೈವಿದ್ಯ ಮಂಡಳಿ, ಕೇಂದ್ರ ಪರಿಸರ ಅರಣ್ಯ ಇಲಾಖೆ ಸಚಿವಾಲಯಕ್ಕೆ ಆಕ್ಷೇಪಣೆಯ ಪತ್ರವನ್ನು ಬರೆದಿದ್ದಾರೆ ಎನ್ನಲಾಗಿದೆ.

ಅರಣ್ಯ ಸಂರಕ್ಷಣಾ ಕಾಯ್ದೆ 1980 ಹಾಗೂ 1986ರ ಸವೋಚ್ಚ ನ್ಯಾಯಾಲಯ ಅಲ್ಲದೆ ಇತರ ಮುಖ್ಯ ನ್ಯಾಯಾಲಯಗಳು ಪರಿಸರ ಅರಣ್ಯ ಸಂರಕ್ಷಣೆಗೆ ನೀಡಿದ ತೀರ್ಪುಗಳ ವಿರುದ್ಧವಾಗಿ ಇಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಕೇಂದ್ರ ಸರಕಾರ ಇತ್ತೀಚೆಗೆ ಜಾರಿ ತಂದಿರುವ ಸುಸ್ಥಿರ ಪರಿಸರ ಪ್ರವಾಸೋದ್ಯಮ ಕುರಿತ ಮಾರ್ಗದರ್ಶಿ ಸೂತ್ರಗಳು 2021 ಪ್ರಕಾರ, ಪರಿಸರ ಪ್ರವಾಸೋದ್ಯಮ ಸೌಕರ್ಯ ಒದಗಿಸಲು ಅರಣ್ಯ ಭೂಮಿಯ ಮೇಲೆ ಯಾವುದೇ ಶಾಶ್ವತ ಕಟ್ಟಡ ಕಟ್ಟುವಂತಿಲ್ಲ. ವಾಣಿಜ್ಯೋದ್ಯಮ ಹೊಟೇಲ್ ನಿರ್ಮಿಸಲು ಅವಕಾಶವೇ ಇರುವುದಿಲ್ಲ ಎಂದು ಗಿರಿಧರ್ ಕುಲಕರ್ಣಿ ಆಕ್ಷೇಪಣೆಯ ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಅರಣ್ಯ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ಪತ್ರ: ಗಿರಿಧರ್ ಕುಲಕರ್ಣಿ ಅವರ ಆಕ್ಷೇಪಣೆಯನ್ನು ಸ್ವೀಕರಿಸಿದ ಕೇಂದ್ರ ಅರಣ್ಯ ಸಚಿವಾಲಯ ಈಗಿರುವ ನಿಯಮಾವಳಿಗಳ ಅಡಿಯಲ್ಲಿ ಕ್ರಮ ಕೈಗೂಳ್ಳುವಂತೆ ರಾಜ್ಯ ಪರಿಸರ ಅರಣ್ಯ ಅಪರ ಮುಖ್ಯ ಕಾರ್ಯದರ್ಶಿಗೆ ಆಗಸ್ಟ್ 9 ರಂದು ಪತ್ರವನ್ನು ಬರೆದು ಸೂಚನೆ ನೀಡಿದೆ. ಕೇಂದ್ರದ ಸೂಚನೆಯನ್ನು ರಾಜ್ಯ ಪರಿಸರ ಅರಣ್ಯ ಇಲಾಖೆ ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ಪಾಲನೆ ಮಾಡುತ್ತದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

ಜೋಗದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಬ್ರಿಟಿಷ್ ಬಂಗಲೆ, ರೆಸಾರ್ಟ್ ಸೇರಿದಂತೆ ಸಾಕಷ್ಟಿವೆ. ಜಲಪಾತದಲ್ಲಿ ಗುಡ್ಡಕುಸಿತ ಇದೆ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಪಂಚತಾರಾ ಹೊಟೇಲ್ ನಿರ್ಮಾಣ ಬೇಡ. ಜೋಗವನ್ನು ವಿಶ್ವ ಪಾರಂಪಾರಿಕ ತಾಣ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಣೆ ಮಾಡಬೇಕು.
ಅಖಿಲೇಶ್ ಚಿಪ್ಲಿ, ಪರಿಸರ ಹೋರಾಟಗಾರ

Writer - ಶರತ್ ಕುಮಾರ್

contributor

Editor - ಶರತ್ ಕುಮಾರ್

contributor

Similar News