ಬ್ರಹ್ಮಾವರ: ಹೊಳೆಯಲ್ಲಿ ಮುಳುಗಿ ಯುವಕರಿಬ್ಬರು ಮೃತ್ಯು
ಬ್ರಹ್ಮಾವರ, ಅ.20: ಹೊಳೆಯಲ್ಲಿ ಈಜಾಡುತ್ತಿದ್ದ ವೇಳೆ ಓರ್ವ ಬಾಲಕ ಸಹಿತ ಇಬ್ಬರು ನೀರಿನಲ್ಲಿ ಮೃತಪಟ್ಟ ಘಟನೆ ಉಗ್ಗೆಲ್ ಬೆಟ್ಟು ಮಡಿಸಾಲು ಎಂಬಲ್ಲಿ ನಡೆದಿದೆ.
ಮೃತರನ್ನು ಚಾಂತಾರು ನಿವಾಸಿ ಉದಯ ಕುಮಾರ್ ಎಂಬವರ ಪುತ್ರ ಶ್ರೇಯಸ್(18) ಹಾಗೂ ವಾರಂಬಳ್ಳಿಯ ಸ್ವರ್ಣನಗರ ಸನ್‌ಶೈನ್ ಬಿಲ್ಡಿಂಗ್ ನಿವಾಸಿ ಅನಸ್(16) ಎಂದು ಗುರುತಿಸಲಾಗಿದೆ. ಇವರು ತಮ್ಮ ಸ್ನೇಹಿತ ಸಂಜಯ್ ಜೊತೆ ಅ.19ರಂದು ಮಧ್ಯಾಹ್ನ ವೇಳೆ ನದಿಗೆ ಈಜಲು ಹೋಗಿದ್ದರು. ಸಂಜಯ್ ದಡದಲ್ಲಿ ಈಜುತ್ತಿದ್ದರೆ ಶ್ರೇಯಸ್ ಹಾಗೂ ಅನಾಸ್ ನದಿಯ ಮಧ್ಯೆ ಹೋಗಿದ್ದರೆನ್ನಲಾಗಿದೆ. ಈ ವೇಳೆ ಅವರಿಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಇದನ್ನು ನೋಡಿದ ಸಂಜಯ್ ಗಾಬರಿಯಿಂದ ಯಾರಲ್ಲೂ ವಿಚಾರ ಹೇಳದೆ ಮುಚ್ಚಿಟ್ಟಿದ್ದನೆನ್ನಲಾಗಿದೆ. ಸಂಜೆ ಮಾಹಿತಿ ತಿಳಿದು ಮನೆಯವರು, ಸ್ಥಳೀಯರು, ಅಗ್ನಿ ಶಾಮಕದಳದವರು ನಾಪತ್ತೆಯಾದವರಿಗೆ ಹುಡುಕಾಟ ನಡೆಸಿದರು. ಆದರೂ ಬಾಲಕರು ಪತ್ತೆಯಾಗಿರಲಿಲ್ಲ. ಮತ್ತೆ ಇಂದು ಬೆಳ್ಳಗೆಯಿಂದ ಹುಡುಕಾಟ ಮುಂದುವರಿಸಿದಾಗ ಬೆಳಗ್ಗೆ 10:30ರ ಸುಮಾರಿಗೆ ಇಬ್ಬರ ಮೃತದೇಹ ಹೇರೂರು ರೈಲ್ವೆ ಸೇತುವೆ ಬಳಿ ಪತ್ತೆಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞ ಈಶ್ವರ ಮಲ್ಪೆ ಪಾಲ್ಗೊಂಡಿದ್ದರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.