ಆರೆಸ್ಸೆಸ್ಸ್ ಸಮವಸ್ತ್ರದಲ್ಲಿ ಇರುವ ವ್ಯಕ್ತಿ ನಾನಲ್ಲ: ಸುಳ್ಯ ಎಎಸ್ಸೈ ಸ್ಪಷ್ಟನೆ
ಮಂಗಳೂರು, ಅ.20: ಸಂಪ್ಯ ಠಾಣೆಯ ಒಬ್ಬ ಎಎಸ್ಸೈಯನ್ನು ಹೋಲುವ ವ್ಯಕ್ತಿಯು ಆರೆಸ್ಸೆಸ್ ಸಮವಸ್ತ್ರ ಧರಿಸಿ ನಿಂತುಕೊಂಡಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಫೋಟೋದಲ್ಲಿರುವ ಒಬ್ಬ ವ್ಯಕ್ತಿ ಮೂಲತಃ ಸುಳ್ಯದ, ಸದ್ಯ ಸಂಪ್ಯ ಠಾಣೆಯಲ್ಲಿ ಎಎಸ್ಸೈ ಆಗಿರುವ ನಾರಾಯಣ ಗೌಡ ಅವರನ್ನು ಹೋಲುತ್ತಿರುವುದು ಇದಕ್ಕೆ ಕಾರಣ.
ಮಂಗಳವಾರದಿಂದ ‘ಸಂಪ್ಯ ಪೊಲೀಸ್ ಅಧಿಕಾರಿ ಆರೆಸ್ಸೆಸ್ ಸಮವಸ್ತ್ರದಲ್ಲಿ’ ಎಂಬ ಒಕ್ಕಣೆಯೊಂದಿಗೆ ಈ ಫೋಟೊ ಭಾರೀ ವೈರಲ್ ಆಗಿದೆ. ಫೋಟೋದಲ್ಲಿ ಮೂವರು ಕಾಣುತ್ತಿದ್ದು, ಒಬ್ಬರು ನಾರಾಯಣ ಗೌಡ ಅವರನ್ನು ಹೋಲುತ್ತಾರೆ.
ಈ ಬಗ್ಗೆ ‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ನಾರಾಯಣ ಗೌಡ, “ನಾನು ಕಳೆದ 6 ವರ್ಷಗಳಿಂದ ಸಂಪ್ಯ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದೇನೆ. ಪೊಲೀಸ್ ಇಲಾಖೆಯ ಕೆಲಸವಲ್ಲದೆ ಯಾವತ್ತೂ ಯಾವುದೇ ಸಂಘಟನೆಗಳಲ್ಲಿ ತೊಡಗಿಸಿಕೊಂಡವನಲ್ಲ. ನನಗೆ ಆಗದ ಯಾರೋ ಕಿಡಿಗೇಡಿಗಳು ಇದನ್ಬು ಸೃಷ್ಟಿರಬೇಕು. ನಮ್ಮ ಸರ್ಕಲ್ ಇನ್ ಸ್ಪೆಕ್ಟರ್ ಮತ್ತು ಸಬ್ ಇನ್ ಸ್ಪೆಕ್ಟರ್ ನಿನ್ನೆ ರಾತ್ರಿ ಈ ಫೋಟೊ ನನ್ನ ಗಮನಕ್ಕೆ ತಂದು ಸ್ಪಷ್ಟನೆ ಕೇಳಿದ್ದರು. ಅದು ನಾನಲ್ಲವೆಂದು ಸ್ಪಷ್ಟಪಡಿಸಿರುವೆ. ನನಗೆ ಆಗದ ಯಾರೋ ಈ ಕೃತ್ಯ ಎಸಗಿರಬೇಕು” ಎಂದು ತಿಳಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸುತ್ತೀರಾ? ಎಂದು ಕೇಳಿದ್ದಕ್ಕೆ ಈಗ ಹಿರಿಯಾಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಅವರು ಸೂಚನೆಯಂತೆ ಮುಂದುವರಿಯುತ್ತೇನೆ ಎಂದು ಹೇಳಿದರು.
ಒಟ್ಟಿನಲ್ಲಿ ಈ ಫೋಟೊ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರ ಎಂದು ಕಾದು ನೋಡಬೇಕಿದೆ.