ಐವನ್ ಡಿಸೋಜ ಮನೆಗೆ ಬಜರಂಗದಳದಿಂದ ಮುತ್ತಿಗೆ ಯತ್ನ: 10 ಕಾರ್ಯಕರ್ತರ ಬಂಧನ, ಬಿಡುಗಡೆ
ಮಂಗಳೂರು, ಅ.20: ಕೇಸರಿ ಬಟ್ಟೆ ಹಾಕಿ ಬಜರಂಗದಳದವರು ಅನೈತಿಕ ವರ್ತನೆ ತೋರುತ್ತಾರೆ ಎಂದು ಹೇಳಿಕೆ ನೀಡಿದ್ದ ಆರೋಪದಲ್ಲಿ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಅವರ ಮನೆಗೆ ಬಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಬಜರಂಗದಳದ ಸಹಸಂಚಾಲಕ ಪುನೀತ್ ಅತ್ತಾವರ, ಕಾರ್ಯಕರ್ತರಾದ ಬಿಪಿನ್ ವಾಮಂಜೂರು, ಹರೀಶ್ ಮೂಡುಶೆಡ್ಡೆ ಸಹಿತ 10 ಮಂದಿಯನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.
ಮಂಗಳವಾರ ಖಾಸಗಿ ಚಾನೆಲ್‌ವೊಂದರ ಚರ್ಚೆಯಲ್ಲಿ ಐವನ್ ಡಿಸೋಜ, ಕೇಸರಿ ಶಾಲು ಹಾಕಿದ ಬಜರಂಗದಳದವರು ಸಮಾಜ ದ್ರೋಹಿಗಳು, ದರೋಡೆಕೋರರ ಕೂಟ ಎಂದು ಐವನ್ ಡಿಸೋಜ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಈ ಹೇಳಿಕೆ ಖಂಡಿಸಿ ಬುಧವಾರ ಬೆಳಗ್ಗೆ 11:30ರ ಸುಮಾರಿಗೆ ಬಜರಂಗದಳ ಕಾರ್ಯಕರ್ತರು ಐವನ್ ಅವರ ವೆಲೆನ್ಸಿಯಾದಲ್ಲಿನ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದೇ ವೇಳೆ ಐವನ್ ಡಿಸೋಜ ಅವರ ಮನೆಗೆ ಕೇಸರಿ ಬಣ್ಣ ಬಳಿಯಲೂ ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ಕಾರ್ಯಕರ್ತರನ್ನು ಅರ್ಧದಲ್ಲೇ ತಡೆದ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸರು 10 ಮಂದಿಯನ್ನು ಬಂಧಿಸಿ, ನಂತರ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿದ್ದಾರೆ.