ಬಾಂಗ್ಲಾದೇಶದಲ್ಲಿ ಹಿಂದೂ ಸಿಕ್ಖರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಮಂಗಳೂರು, ಅ.20: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಿಖ್ಖರ ಮೇಲಿನ ದೌರ್ಜನ್ಯ, ಹಿಂದೂ ದೇವಾಲಯ ಹಾಗೂ ಹಿಂದೂ ಮನೆಗಳ ಧ್ವಂಸವನ್ನು ಖಂಡಿಸಿ ವಿಶ್ವಹಿಂದು ಪರಿಷತ್ ನೀಡಿದ ಕರೆಯಂತೆ ಬುಧವಾರ ದೇಶಾದ್ಯಂತ ಪ್ರತಿಭಟನೆ ನಡೆದಿದ್ದು, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ಪ್ರತಿಭಟನೆ ನಡೆಯಿತು.
ಮಂಗಳೂರಿನ ಮಲ್ಲಿಕಟ್ಟೆ ವೃತ್ತದ ಬಳಿ ವಿಶ್ವ ಹಿಂದು ಪರಿಷತ್ ಬಜರಂಗದಳ ಮತ್ತು ದುರ್ಗಾವಾಹಿನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಲ್ಲಿಕಟ್ಟೆ ದ್ವಾರದ ಬಳಿ ಸೇರಿದ ನೂರಾರು ಕಾರ್ಯಕರ್ತರು ಬಾಂಗ್ಲಾ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಾಂಗ್ಲಾ ಸರಕಾರದ ನಡೆಯನ್ನು ಖಂಡಿಸಿದರು. ಅಲ್ಲದೆ ಕೆಲಹೊತ್ತು ರಸ್ತೆ ತಡೆಯ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ಮಾತನಾಡಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಿಕ್ಖರ ಮೇಲಿನ ದೌರ್ಜನ್ಯವನ್ನು ಖಂಡಿಸಿದರು.
ಬಾಂಗ್ಲಾದಲ್ಲಿ ಅಲ್ಪಂಸಖ್ಯಾತ ಹಿಂದೂ ಸಿಖ್ಖರ ಮೇಲಿನ ಅನಾಗರಿಕ ದೌರ್ಜನ್ಯವನ್ನು ನಿಲ್ಲಿಸಲು, ಅವರಿಗೆ ಭದ್ರತೆ, ನ್ಯಾಯ ಮತ್ತು ಪರಿಹಾರವನ್ನು ಒದಹಗಿಸಲು ಬಾಂಗ್ಲಾ ಸರಕಾರವನ್ನು ಭಾರತ ಸರಕಾರ ಒತ್ತಾಯಿಸುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಕಾರ್ಪೋರೇಟರ್‌ಗಳಾದ ಮನೋಹರ ಶೆಟ್ಟಿ ಕದ್ರಿ, ಶಕೀಲಾ ಕಾವಾ, ಜಯಲಕ್ಷ್ಮೀ ಶೆಟ್ಟಿ, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.