ವಾಲ್ಮೀಕಿ ರಾಮಾಯಣ ಎಲ್ಲಾ ಕಾಲಕ್ಕೂ ಪೂರಕ: ಸಚಿವ ಅಂಗಾರ
ಮಂಗಳೂರು, ಅ.20: ಮಹರ್ಷಿ ವಾಲ್ಮೀಕಿಯವರ ರಾಮಾಯಣ ಕೇವಲ ಕಾವ್ಯ ಮಾತ್ರ ಅಲ್ಲ. ಅದು ಅವರ ಕಾಲದಲ್ಲಿ ನಡೆದ ಸತ್ಯಾಸತ್ಯತೆ ಹಾಗೂ ಘಟನೆಗಳಿಂದ ಕೂಡಿದೆ. ಅದು ಎಲ್ಲಾ ಕಾಲಕ್ಕೂ ಪೂರಕವಾಗಿದ್ದು, ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಅಂಗಾರ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಇಂದು ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬೇಡರ ಜನಾಂಗದಲ್ಲಿ ಹುಟ್ಟಿದ ಮಹರ್ಷಿ ವಾಲ್ಮೀಕಿಯವರು ರಾಮಾಯಣ ಕಾವ್ಯದ ಮೂಲಕ ನಮಗೆ ಆದರ್ಶಪ್ರಾಯರಾಗಿದ್ದಾರೆ. ನಮಗೆ ಜಾತಿಗಳು ಮುಖ್ಯ ಅಲ್ಲ. ನಾವು ನೀತಿಯಿಂದ ಮೇಲ್ಪಂಕ್ತಿಯನ್ನು ಹಾಕಬೇಕು. ಆಗ ನಾವು ಕೂಡಾ ಸಮಾಜದಲ್ಲಿ ಸ್ಥಾನ ಹಾಗೂ ಗೌರವ ಪಡೆಯಲು ಸಾಧ್ಯ ಆಗುತ್ತದೆ ಎಂಬುದನ್ನು ಮಹರ್ಷಿ ವಾಲ್ಮೀಕಿ ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ನಾವು ಕಾಲದಲ್ಲಿ ಕಲಿಯುವ ಆಸಕ್ತಿ ಇದ್ದರೂ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಹಾಗಿಲ್ಲ, ಪೋಷಕರು ತಮ್ಮ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸುತ್ತಾರೆ. ಜತೆಗೆ ಸರಕಾರ ಕೂಡಾ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದೆ, ವಿವಿಧ ಯೋಜನೆಗಳ ಮೂಲಕ ಕೋಟ್ಯಂತರ ರೂಪಾಯಿಗಳ್ನು ವ್ಯಯಿಸುತ್ತಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಸಾಧನೆ ಮಾಡಬೇಕೆಂದರು.
ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ನಾವು ಪ್ರಸಕ್ತ ಸಾಂಕೇತಿಕವಾಗಿ ಆಚರಣೆ ಮಾಡುತ್ತಿದ್ದರೂ, ಅವರ ಜೀವನ ಚರಿತ್ರೆಯನ್ನು ಓದಿದಾಗ, ವ್ಯಕ್ತಿಯೊಬ್ಬ ಯಾವ ರೀತಿ ತನ್ನ ಆಲೋಚನೆಗಳನ್ನು ಬದಲಾವಣೆ ಮಾಡಿಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದಾಗ ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಸಚಿವರು ಗೌರವಿಸಿದರು. ವಿವಿಧ ಅಭಿವೃದ್ಧಿ ಯೋಜನೆಯಡಿ ಫಲಾನುಭವಿಗಳಿಗೆ ವಾಹನ ಪರವಾನಿಗೆ ಪತ್ರವನ್ನು ಜಿಲ್ಲಾಧಿಕಾರಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಆನಂದ ಕುಮಾರ್, ಸಮಗ್ರ ಗಿರಿಜನ ಯೋಜನೆ ಯೋಜನಾ ಸಮನ್ವಯಾಧಿಕಾರಿ ಡಾ. ಹೇಮಲತಾ, ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.