​ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಬಾಂಗ್ಲಾದೇಶದ ಕ್ರಿಕೆಟಿಗ ಮಶ್ರಫೆ ಮೊರ್ತಾಝಾ

Update: 2021-10-20 11:00 GMT

ಢಾಕಾ: ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ಮಶ್ರಫೆ ಮೊರ್ತಾಝಾ ಅವರು  ಇತ್ತೀಚೆಗೆ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧದ ದಾಳಿಯನ್ನು ಖಂಡಿಸಿದ್ದಾರೆ.

ಬಾಂಗ್ಲಾದೇಶ ಎರಡು ಸೋಲುಗಳನ್ನು ಅನುಭವಿಸಿದೆ ಎಂದು ಫೇಸ್ ಬುಕ್ ನಲ್ಲಿ ಬರೆದಿರುವ ಮೊರ್ತಾಝಾ,  ಟ್ವೆಂಟಿ- 20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋಲು ಹಾಗೂ ಸ್ವದೇಶದಲ್ಲಿ ರಂಗಪುರ ಜಿಲ್ಲೆಯಲ್ಲಿ ರವಿವಾರ ನಡೆದ ಕೋಮುಗಲಭೆಯಲ್ಲಿ ಹಿಂದೂಗಳ 20 ಮನೆಗಳನ್ನು ಗುಂಪೊಂದು ದಹಿಸಿರುವುದನ್ನು ಉಲ್ಲೇಖಿಸಿದರು.

"ನಿನ್ನೆ ಎರಡು ಸೋಲಿಗೆ ಸಾಕ್ಷಿಯಾಗಿದ್ದೇವೆ. ಒಂದು ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದ್ದು, ಅದೊಂದು  ನೋವಿನ ಸಂಗತಿಯಾಗಿದೆ. ಇನ್ನೊಂದು ಬಾಂಗ್ಲಾದೇಶದಲ್ಲಿ ನಡೆದಿರುವುದು. ಅದು ನನ್ನ ಹೃದಯವನ್ನು ಛಿದ್ರಗೊಳಿಸಿದೆ. ಇದು ನಾವು ನೋಡಲು ಬಯಸಿದ ಕೆಂಪು ಮತ್ತು ಹಸಿರು (ರಾಷ್ಟ್ರೀಯ ಧ್ವಜದ ಬಣ್ಣ) ಅಲ್ಲ. ಹಾಗಾಗಿ ಹಲವು ಕನಸುಗಳು, ಕಷ್ಟಪಟ್ಟು ಗಳಿಸಿದ ಗೆಲುವುಗಳು ಕ್ಷಣಾರ್ಧದಲ್ಲಿ ಕಳೆದುಹೋಗಿವೆ"ಎಂದು ಅವರು ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ..
ಕಳೆದ ಎರಡು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯ ಹಾಗೂ  ಅವರ ಪ್ರಾರ್ಥನಾ ಸ್ಥಳಗಳನ್ನು ಗುರಿಯಾಗಿಸಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ.

ರವಿವಾರ, ಬಾಂಗ್ಲಾದೇಶದ ರಂಗಪುರದಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ಧರ್ಮ ನಿಂದನೆ ಮಾಡಲಾಗಿದೆ ಎಂಬ ವದಂತಿಯ ಕಾರಣಕ್ಕೆ  ದಂಗೆಕೋರರ ಗುಂಪು ಕನಿಷ್ಠ 66 ಮನೆಗಳನ್ನು ಧ್ವಂಸ ಮಾಡಿತ್ತು. ಹಿಂದೂಗಳ 20 ಮನೆಗಳನ್ನು ಸುಟ್ಟುಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News