ಪಿಎಂ ಕೇರ್ಸ್ ಯೋಜನೆ ಪಾರದರ್ಶಕತೆ ಹೊಂದಿರಲಿಲ್ಲ : ವೀರಪ್ವ ಮೊಯ್ಲಿ ಆರೋಪ

Update: 2021-10-20 12:33 GMT

ಕಾರ್ಕಳ : ‘ಕೋವಿಡ್ ಸಂದರ್ಭ ದೇಣಿಗೆ ಸಂಗ್ರಹಕ್ಕೆ ಬಳಸಿದ ವೇದಿಕೆ ಪಿಎಂ ಕೇರ್ಸ್ ಯೋಜನೆಯು ಪಾರದರ್ಶಕತೆಯನ್ನು ಹೊಂದಿರಲಿಲ್ಲ. ಹಣ ಸಂಗ್ರಹ ಹಾಗೂ ಖರ್ಚುಗಳ ಲೆಕ್ಕವಿಡದ ಈ ನಿಧಿಯೇ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಶೈಲಿಯನ್ನು ಪ್ರತಿಬಿಂಬಿಸುತ್ತದೆ. ಆಡಳಿತದಲ್ಲಿರುವ ಸರಕಾರಗಳಿಗೆ ಜನರ ಕಲ್ಯಾಣ ಮುಖ್ಯವಾಗಬೇಕೆ ಹೊರತು ತಮ್ಮ ಪಕ್ಷದ ಹಾಗೂ ವೈಯಕ್ತಿಕ ವರ್ಚಸ್ಸಿನ ಬೆಳವಣಿಗೆಯೇ ಮುಖ್ಯವಾಗಬಾರದು. ನರೇಂದ್ರ ಮೋದಿಯವರು ವ್ಯಯಿಸುತ್ತಿರುವ ಜಾಹೀರಾತು ಹಣದ ಮೊತ್ತವೇ ಇದೆಲ್ಲವನ್ನೂ ಬಹಿರಂಗಪಡಿಸುತ್ತದೆ’ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಂ. ವೀರಪ್ವ ಮೊಯ್ಲಿ ಅಭಿಪ್ರಾಯಪಟ್ಟರು.

ಅವರು ಕಾರ್ಕಳ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು.

'ಕೋವಿಡ್ ಸಂಕಷ್ಟದಿಂದ ದೇಶದ ಜನತೆ ಇನ್ನೂ ಹೊರಬಂದಿಲ್ಲ. ಆದರೆ ದೇಶದಲ್ಲಿ ಯಾವ ಜನಕಲ್ಯಾಣ ಯೋಜನೆ ಜಾರಿಯಲ್ಲಿದೆ ಎಂಬುದು ಈಗಿನ ಪ್ರಶ್ನೆ. ಯಾವುದೇ ಉದ್ಯೋಗ ನೀಡುವ ಬೃಹತ್ ಯೋಜನೆ ಈ ಸರಕಾರ ನಡೆಸುತ್ತಿದೆಯೇ? ಅಥವಾ ಹಿಂದಿನ ಸರಕಾರ ಮಾಡಿರುವ ಜನಕಲ್ಯಾಣ ಯೋಜನೆಯನ್ನು ವಿಸ್ತರಿಸುವ, ಸಾರ್ವಜನಿಕ ರಂಗದ ಬೃಹತ್ ಕೈಗಾರಿಕೋದ್ಯಮಗಳ ವಿಸ್ತರಣೆಯನ್ನಾದರೂ ಮಾಡುತ್ತಿದೆಯೇ ? ನಾನು ಕೇಂದ್ರದಲ್ಲಿ ಸಚಿವನಾಗಿದ್ದಾಗ ಮಂಗಳೂರು ಎಂಆರ್‍ಪಿಎಲ್‍ನ ವಿಸ್ತರಣೆಗಾಗಿ 60 ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದ್ದೇನೆ. ಇದರಿಂದ ಹೊಸ ಉದ್ಯೋಗ ಸೃಷ್ಟಿಯಾಗಿತ್ತು. ಮೋದಿ ಸರಕಾರ ನಯಾಪೈಸೆಯನ್ನು ವಿನಿಯೋಗಿಸುತ್ತಿಲ್ಲ. ಇಂತಹ ಯಾವುದಾದರೂ ಯೋಜನೆಗಳು ಕೇಂದ್ರ ಸರಕಾರದ ಮುಂದಿದೆಯಾ?’ ಎಂದು ಮೊಯ್ಲಿ ಪ್ರಶ್ನಿಸಿದರು.

‘ಪರಿಸರ ನಿರ್ವಹಣೆ ವಿಷಯದಲ್ಲೂ ಕೇಂದ್ರ ಸರಕಾರ ಬಹಳಷ್ಟು ಎಡವಿದೆ. ನೀರು, ನೈರ್ಮಲ್ಯ ನಿರ್ವಹಣೆಯಲ್ಲೂ ಪ್ರಗತಿ ಕೆಳಮುಖವಾಗಿದೆ. ಮೋದಿ ಸರಕಾರದ ಧೋರಣೆ ಜನಮುಖಿಯಾಗಿಲ್ಲ. ಕಾಂಗ್ರೆಸ್ ಸರಕಾರವು ಅನೇಕ ಜನಕಲ್ಯಾಣ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿತ್ತು’ ಎಂದರು.

‘ಕಾರ್ಕಳದಲ್ಲಿ ಪುರಭವನಕ್ಕಾಗಿ ನಮ್ಮ ಅವಧಿಯಲ್ಲಿ ಅನುದಾನ ಮಂಜೂರಾಗಿತ್ತು. ಈಗಿನ ಶಾಸಕರ ನಿರ್ಲಕ್ಷ್ಯದಿಂದ ಆ ಹಣ ವಾಪಾಸು ಸರಕಾರಕ್ಕೆ ಹೋಗಿತ್ತು. ಕಾರ್ಕಳದಲ್ಲಿ ಪಕ್ಷ ಸಂಘಟನೆಗೆ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಒಗ್ಗೂಡಿದ್ದಾರೆ. ಗಾಂಧಿ ನಡಿಗೆ ಎಂಬ ಕಾರ್ಯಕ್ರಮದ ಮೂಲಕ ಸಂಘಟನೆ ಯಶಸ್ವಿಯಾಗಿ ಮಾಡಲಾಗುತ್ತಿದೆ. ಕಾರ್ಕಳದಲ್ಲಿ ಈ ಕಾರ್ಯಕ್ರಮ ನಡೆಸುವ ಉದ್ದೇಶವಿದೆ. ಚಿಕ್ಕಬಳ್ಳಾಪುರದಲ್ಲಿಯೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮ ನಡೆಯುತ್ತಿದೆ. ಬೂತ್ ಮಟ್ಟದ, ಗ್ರಾಮ ಪಂಚಾಯತ್ ಮಟ್ಟದ ಕಾರ್ಯಕರ್ತರನ್ನು ಸಂಘಟಿಸುವುದು, ಸೈದ್ಧಾಂತಿಕವಾಗಿ ಕಾಂಗ್ರೆಸ್ ವಿಚಾರಗಳ ಬಗ್ಗೆ ಅರಿವು ಮೂಡಿಸುವುದು ಗಾಂಧಿ ನಡಿಗೆಯ ಉದ್ದೇಶ. ಪಂಚಾಯತ್ ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ನಡೆದ ಬಳಿಕ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಸಮಾವೇಶಗಳು ನಡೆಯಲಿದೆ’ ಎಂದರು.

'ಪೆಟ್ರೋಲಿಯಂ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಸಾಧ್ಯವಿದೆ. ನಾನು ಈಗೇನಾದರೂ ಪೆಟ್ರೋಲಿಯಂ ಸಚಿವನಾಗಿದ್ದಿದ್ದರೆ 45 ರೂಪಾಯಿಗೆ ಪೆಟ್ರೋಲ್ ನೀಡುತ್ತಿದ್ದೆ. ನಾನು ಸಚಿವನಾಗಿದ್ದಾಗ ಕಚ್ಛಾ ತೈಲ ದರ ಗರಿಷ್ಠ ಮಟ್ಟದಲ್ಲಿತ್ತು. ಈಗಿನ ಕಚ್ಚಾ ತೈಲಬೆಲೆಗೆ ಇಷ್ಟೊಂದು ಬೆಲೆ ದುಬಾರಿಯಾಗಿದ್ದು, ಇದನ್ನು ನಿಯಂತ್ರಿಸುವುದು ಕೇಂದ್ರ ಸರಕಾರಕ್ಕೆ ಸಾಧ್ಯವಿದೆ. ನಾವು ಅಧಿಕಾರದಲ್ಲಿದ್ದಾಗ 750 ರೂ. ಗ್ಯಾಸ್ ಸಿಲಿಂಡರ್‍ನ ಅಸಲು ಬೆಲೆಯಾಗಿತ್ತು. ಆದರೆ ಸಬ್ಸಿಡಿ ನೀಡುವ ಮೂಲಕ 350 ರೂ.ಗೆ ನೀಡಿದ್ದೆವು. ಕೇಂದ್ರ ಅಬಕಾರಿ ಸುಂಕ, ವ್ಯಾಟ್ ಹಾಕುವ ಮೂಲಕ ಜನರ ಮೇಲೆ ಹೊರೆಯಾಗುವಂತೆ ಮಾಡಿದೆ. ಪೆಟ್ರೋಲಿಯಂ ಉತ್ವನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. `ಕೇಂದ್ರ ಹಾಗೂ ರಾಜ್ಯ ಸರಕಾರಗಳ ವ್ಯಾಟ್ ಮತ್ತು ಅಬಕಾರಿ ಸುಂಕಗಳ ಮೂಲಕ ಪೆಟ್ರೋಲಿಯಂ ಉತ್ವನ್ನಗಳ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. 2014ರ ಬಳಿಕ ಕೇಂದ್ರ ಸರಕಾರ 31.5 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಹಣವನ್ನು ಹೆಚ್ಚುವರಿಯಾಗಿ ವಿಧಿಸಿದೆ. ಇದಷ್ಟೇ ಅಲ್ಲದೆ 5 ಲಕ್ಷ ಕೋಟಿ ರಾಜ್ಯ ಸರಕಾರವೂ ತೆರಿಗೆ ಸಂಗ್ರಹಿಸಿತ್ತು. ಹಿಂದಿನ ಯುಪಿಎ ಸರಕಾರವೇ ಇಂಧನ ಬೆಲೆಯೇರಿಕೆಗೆ ಕಾರಣ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ವಾಜಪೇಯಿ ಸರಕಾರದಿಂದಲೇ ಬಾಂಡ್ ನೀಡುವ ಯೋಜನೆ ಆರಂಭಗೊಂಡಿತ್ತು. 35 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದ ಮೋದಿ ಸರಕಾರ ಬಾಂಡ್‍ನ ಹಣ ನೀಡಿದ್ದು ಕೇವಲ 3500 ಕೋಟಿಯಷ್ಟೇ’ ಎಂದರು.

`ಕಾರ್ಕಳ ಕಾಂಗ್ರೆಸ್‍ನಲ್ಲಿ ನಾಯಕರ ನಡುವೆ ಯಾವುದೇ ಭಿನ್ನಮತವಿಲ್ಲ. ಗೇಣಿದಾರರ ಕಾನೂನಿನಿಂದ 35 ಲಕ್ಷ ಜನರು ಫಲಾನುಭವಿಗಳಿದ್ದರು. ಭೂಮಸೂದೆ ಹಾಗೂ ಅಕ್ರಮಸಕ್ರಮಗಳ ಮೂಲಕ ಜನರಿಗೆ ವಸತಿ ನೀಡಿದ್ದು ಕಾಂಗ್ರೆಸ್ ಪಕ್ಷದ ಕೊಡುಗೆ. ಕಾಂಗ್ರೆಸ್ ಯೋಜನೆಗಳ ಬಗ್ಗೆ ಅರಿವಿನ ಕೊರತೆ ನೀಗಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಡೀಮ್ಡ್ ಅರಣ್ಯ ವಿಷಯದಲ್ಲಿ ನಮ್ಮ ಸರಕಾರವಿದ್ದಾಗ ಶಾಸಕರು, ಸಚಿವರ ಸಮಿತಿ ರಚಿಸಿ ವರದಿ ತಯಾರಿಸಿದ್ದು, ಈಗಿನ ರಾಜ್ಯ ಸರಕಾರ ಈ ಬಗ್ಗೆ ಒಂದು ಸಭೆಯನ್ನೂ ನಡೆಸಿಲ್ಲ’ ಎಂದು ದೂರಿದರು.

`ಮತಾಂತರ ಹಾಗೂ ಗೋಹತ್ಯೆ ಹೆಚ್ಚಳವಾಗುವುದಕ್ಕೆ ಬಿಜೆಪಿ ಸರಕಾರವೇ ನೇರಹೊಣೆ. ಕಾಂಗ್ರೆಸ್ ಸರಕಾರವಿದ್ದಾಗ ಇಂತಹ ಯಾವುದೇ ಸಮಸ್ಯೆಗಳು ಇರಲಿಲ್ಲ. ಈಗ ಈ ಸಮಸ್ಯೆಗಳನ್ನು ಸರಕಾರವೇ ಹುಟ್ಟುಹಾಕುತ್ತಿದೆ. ಇದು ಬಿಜೆಪಿಯ ವೈಫಲ್ಯವನ್ನು ಸೂಚಿಸುತ್ತದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಮೊಯ್ಲಿ, ಕಾರ್ಕಳ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಮಾಜಿ ಪುರಸಭಾಧ್ಯಕ್ಷ ಸುಬಿತ್ ಎನ್.ಆರ್., ಪುರಸಭಾ ಸದಸ್ಯ ಶುಭದರಾವ್, ಜಿಲ್ಲಾ ಎಸ್‍ಸಿ ಎಸ್‍ಟಿ ವಿಭಾಗದ ಉಪಾಧ್ಯಕ್ಷ ಸೋಮನಾಥ ನಾಯಕ್, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಸುಧಾಕರ ಕೋಟ್ಯಾನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News