×
Ad

ಮಂಗಳೂರು; ರಾಹುಲ್‌ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2021-10-20 18:50 IST

ಮಂಗಳೂರು, ಅ.20: ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ವಿರುದ್ಧ ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ನಿಂದ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಮುಂಭಾಗ ಬುಧವಾರ ಸಂಜೆ ಪ್ರತಿಭಟನೆ ನಡೆಯಿತು. ಈ ವೇಳೆ ಕಟೀಲ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನಳಿನ್‌ ಕುಮಾರ್ ಕಟೀಲ್ ಅವಹೇಳನಕಾರಿ ಪದ ಬಳಸಿದ್ದಾರೆ. ನಳಿನ್ ಓರ್ವ ಅವಿವೇಕಿ. ಬುದ್ಧಿಹೀನ ಸಂಸದ. ಲೋಕಸಭೆಗೆ ಹೋಗಲು ನೀವು ಅನರ್ಹರು. ಕೆಟ್ಟ ಪದ ಬಳಕೆಯ ಮೂಲಕ ಜಿಲ್ಲೆಯ ಮಾನ ಹರಾಜು ಹಾಕುತ್ತಿದ್ದೀರಿ. ಆ ಪದ ಹಿಂಪಡೆದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ದ.ಕ. ಜಿಲ್ಲೆ ಬುದ್ಧಿವಂತರ ಜಿಲ್ಲೆಯಾಗಿದೆ. ಇದು ಶಿವರಾಮ ಕಾರಂತರು, ಯು.ಎಸ್. ಮಲ್ಯ ಹುಟ್ಟಿ ಬೆಳೆದ ನಾಡು. ಸಾಕಷ್ಟು ಸ್ವಾತಂತ್ರ ಹೋರಾಟಗಾರರು, ಹಲವಾರು ಮಹಾನ್ ವ್ಯಕ್ತಿಗಳು ಜಿಲ್ಲೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅವುಗಳು ಇಂದಿಗೂ ಸ್ಮರಣೀಯ. ಬಹಳಷ್ಟು ರಾಜಕಾರಣಿಗಳು ವಿಮಾನ ನಿಲ್ದಾಣ, ಎಂಆರ್‌ಪಿಎಲ್, ನವ ಮಂಗಳೂರು ಬಂದರು, ಕೊಂಕಣ್ ರೈಲ್ವೆಗಳನ್ನು ಜಿಲ್ಲೆಗೆ ತಂದಿರುವ ಇತಿಹಾಸವಿದೆ. ಇಂತಹ ಅತ್ಯದ್ಭುತ ಜಿಲ್ಲೆಗೆ ನಳಿನ್‌ ಕುಮಾರ್ ಕಟೀಲ್ ಕಪ್ಪುಚುಕ್ಕೆಯಾಗಿದ್ದಾರೆ ಎಂದರು.

ಸಂಸದ ನಳಿನ್‌ ಕುಮಾರ್ ಕಟೀಲ್ ಕಳೆದ ಮೂರು ಅವಧಿಯಲ್ಲಿ ಜಿಲ್ಲೆಯ ಜನತೆಗೆ ಏನು ಕೊಡುಗೆ ಕೊಟ್ಟಿದ್ದಾರೆ ? ಪಂಪ್‌ವೆಲ್ ಮೇಲ್ಸೇತುವೆ ಇಲ್ಲಿಯವರೆಗೂ ಪೂರ್ಣಪ್ರಮಾಣವಾಗಿಲ್ಲ. ದುರಸ್ತಿ ಕಾಮಗಾರಿಗಳು ನಡೆಯುತ್ತಲೇ ಸಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ನಿರುದ್ಯೋಗಿಗಳಿದ್ದಾರೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಏನು ಕೊಟ್ಟಿದ್ದೀರಿ? ಬೆಲೆ ಏರಿಕೆಯಿಂದ ಜಿಲ್ಲೆಯೇ ತತ್ತರಿಸಿದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಲುಕ್ಮಾನ್ ಬಂಟ್ವಾಳ್ ನಳಿನ್‌ ಕುಮಾರ್ ಕಟೀಲ್ ಅವರಲ್ಲಿ ಪ್ರಶ್ನೆಗಳ ಸುರಿಮಳೆಗೈದರು.

ಬೆಲೆ ಏರಿಕೆ ಸಹಿತ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯ ನಿಮ್ಮಲ್ಲಿಲ್ಲ. ಬಾಯಿ ತೆರೆದು ಮಾತನಾಡುವ ಶಕ್ತಿಯೂ ಇಲ್ಲ. ಸಂಸದ ಹೇಳಿಕೆಯಿಂದ ಜಿಲ್ಲೆಯೇ ತಲೆ ತಗ್ಗಿಸುವಂತಾಗಿದೆ. ಜಿಲ್ಲೆಯ ಅಸ್ಮಿತೆ ನಶಿಸುವಂತಾಗಿದೆ. ಕರಾವಳಿಯ ಮಾನವನ್ನು ಸಂಸದ ಹರಾಜು ಹಾಕಿದ್ದಾರೆ. ಸಂಸದರು ತಮ್ಮ ಖುರ್ಚಿಯನ್ನು ಉಳಿಸಿಕೊಳ್ಳಲು ರಾಹುಲ್‌ ಗಾಂಧಿ ವಿರುದ್ಧ ತೀರಾ ಕೆಳಮಟ್ಟದ ಪದ ಪ್ರಯೋಗಿಸಿದ್ದಾರೆ. ಅವರ ಹೇಳಿಕೆಯನ್ನು ಜಿಲ್ಲೆಯ ನಾಗರಿಕರು ಒಪ್ಪುವುದಿಲ್ಲ. ಕೂಡಲೇ ನಳಿನ್ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್‌ನ ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ವಿಶ್ವಾಸ್‌ ಕುಮಾರ್ ದಾಸ್ ಮಾತನಾಡಿ, ಸಂಸದ ನಳಿನ್‌ ಕುಮಾರ್ ಕಟೀಲ್ ದೊಡ್ಡ ಅವಿವೇಕಿ. ಅವಿವೇಕಿಗಳಿಂದ ಮಾತ್ರ ಇಂತಹ ಹೇಳಿಕೆಗಳು ಹೊರಬರುತ್ತವೆ. ರಾಹುಲ್ ಗಾಂಧಿ ವಿದೇಶದಲ್ಲಿ ಶಿಕ್ಷಣ ಪಡೆದವರು. ಸುಸಂಸ್ಕೃತ ವಂಶದಲ್ಲಿ ಹುಟ್ಟಿ ಬೆಳೆದವರು. ಗಾಂಧಿ ಕುಟುಂಬವನ್ನು ಕಟೀಲ್ ಹೀಯಾಳಿಸಿದ್ದಾರೆ. ಇಂತಹ ಸಂಸದರು ಜಿಲ್ಲೆಗೆ ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಪ್ರತಿಕೃತಿ ದಹನ: ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ನಳಿನ್‌ ಕುಮಾರ್ ವಿರುದ್ಧ ಯುವ ಕಾಂಗ್ರೆಸ್‌ನಿಂದ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ, ಆಕ್ರೊಶ ವ್ಯಕ್ತಪಡಿಸಲಾಯಿತು. ಬೆಂಕಿಯಲ್ಲಿ ಬೇಯುತ್ತಿದ್ದ ಪ್ರತಿಕೃತಿಗೂ ಕಾರ್ಯಕರ್ತರು ಬೂಟುಗಾಲಿನಿಂದ ಒದ್ದು, ತುಳಿದು ತಮ್ಮ ಆಕ್ರೋಶದ ಕಿಚ್ಚನ್ನು ಹೊರಹಾಕಿದರು.

ಪ್ರತಿಭಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್‌ನ ಜಿಲ್ಲಾ ಉಸ್ತುವಾರಿ ಮಣ್ಣಾರ್ ಮಣ್ಣನ್, ಮನಾಪ ಸದಸ್ಯರಾದ ಶಂಶುದ್ದೀನ್, ಮೋಹನ್ ಕೋಟ್ಯಾನ್, ರಾಜ್ಯ ಹಿಂದುಳಿದ ವರ್ಗದ ಗಣೇಶ್ ಪೂಜಾರಿ, ಪ್ರವೀಣ್ ಬೊಳ್ಳೂರು, ಚಂದ್ರ ಶೇಖರ್ ಪಕ್ಷಿಕೆರೆ, ರಮಾನಂದ ಪೂಜಾರಿ ಕಟೀಲ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸರ್ಫರಾಜ್ ನವಾಝ್, ಜಿಲ್ಲಾ ಉಪಾಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ, ಸೌಮ್ಯ ಲತಾ, ಮುಖಂಡರಾದ ರಮಾನಂದ ಪೂಜಾರಿ, ನವಾಲ್ ಬಿ.ಕೆ., ನವೀದ್ ಅಖ್ತರ್, ರಂಜಿತ್ ಬಂಗೇರ, ಪ್ರಸಾದ್ ಗಾಣಿಗ, ಅನೂಪ್ ಬಂಗೇರ, ಫೈಝಲ್ ಕಡಬ, ಅಶ್ವತ್ಥ್‌ ರಾಜ್, ಮುಹಮ್ಮದ್ ಇರ್ಷಾದ್, ವೈಭವ್ ಶೆಟ್ಟಿ, ಜಿನ್ನಾ ಲೇನಿಟ್ ಲೋಬೊ, ಕವಿತಾ, ಉಮೈ ಬಾನು, ಬ್ಲಾಕ್ ಅಧ್ಯಕ್ಷರಾದ ನವಾಝ್ ನರಿಂಗಾನ, ಮುಹಮ್ಮದ್ ಮುಫೀದ್, ಶಾಹುಲ್ ಹಮೀದ್, ಸೌಹಾನ್ ಎಸ್ಕೆ, ಇಸ್ಮಾಯಿಲ್ ಸಿದ್ದೀಕ್, ಫಯಾಝ್ ಅಮ್ಮೇಮಾರ್, ಇಸ್ಮಾಯಿಲ್, ಸಫ್ವಾನ್, ಸಾಮ್ರಾನ್, ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಾಗರ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News