×
Ad

ಉದ್ಯಾವರ ಗ್ರಾಪಂ ದಲಿತ ನೌಕರನಿಗೆ ದೌರ್ಜನ್ಯ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹ

Update: 2021-10-20 19:31 IST

ಉಡುಪಿ, ಅ.20: ಉದ್ಯಾವರ ಗ್ರಾಪಂ ದಲಿತ ನೌಕರ ಶಿವರಾಜು ಎಂ. ಅವರಿಗೆ ಬಹಿರಂಗವಾಗಿ ಅವಮಾನ ಮಾಡಿ, ದೌರ್ಜನ್ಯ ಎಸಗಿ, ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಮಿತಿ ಒತ್ತಾಯಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ, ಲೆಕ್ಕಸಹಾಯಕರಾದ ಶಿವರಾಜು ಅವರಿಗೆ ಸೆ.23ರಂದು ಉದ್ಯಾವರ ಗ್ರಾಪಂ ಗ್ರಾಮಸಭೆಯಲ್ಲಿ ಆರೋಪಿಗಳಾದ ಗ್ರಾಪಂ ಮಾಜಿ ಸದಸ್ಯರಾದ ಶೇಖರ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್ ಎಂಬವರು ದೌರ್ಜನ್ಯ ಎಸಗಿದ್ದು, ಈ ಬಗ್ಗೆ ಸೆ.25ರಂದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅ.16ರಂದು ಉಡುಪಿ ನ್ಯಾಯಾಲಯ ತಿರಸ್ಕರಿಸಿದೆ. ಇವರ ವಿರುದ್ಧ ಪ್ರಕರಣ ದಾಖಲಾಗಿ 25 ದಿನಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸದೆ ಮೀನಮೇಷ ಎಣಿಸುತ್ತಿದ್ದಾರೆ. ದಲಿತರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸದೆ ಇರುವುದರಿಂದ ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದರು.

ಆರೋಪಿಗಳು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲರಾಗಿದ್ದು, ದಲಿತ ನೌಕರರ ವಿರುದ್ಧ ಜನರನ್ನು ಎತ್ತಿ ಕಟ್ಟಿ ಪ್ರತಿಭಟಿಸುವಂತೆ ಮಾಡಿದ್ದಾರೆ. ಆರೋಪಿಗಳಿಂದ ದಲಿತ ನೌಕರಿಗೆ ಬೆದರಿಕೆ ಇರುವ ಕಾರಣ ಅವರಿಬ್ಬರನ್ನು ಕೂಡಲೇ ಬಂಧಿಸಬೇಕು ಎಂದು ಶೇಖರ್ ಹಾವಂಜೆ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಉದಯ ಕುಮಾರ್ ಮಣೂರು, ದಸಂಸ ಮುಖಂಡರಾದ ಕೃಷ್ಣ ಮಾವಿನಕಟ್ಟೆ, ಗೋಪಾಲ ಕುಕ್ಕುಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News