ಒಡೆದು ಆಳುವ ಬಿಜೆಪಿ ಪರಿವಾರ ಕುತಂತ್ರ ಸೋಲಿಸಲು ಸಿಪಿಎಂ ಕರೆ

Update: 2021-10-20 14:16 GMT

ಉಡುಪಿ, ಅ.20: ಬಿಜೆಪಿ ಮತ್ತು ಅದರ ಸಂಘಟನೆಗಳು ಜನರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಈ ಕುತಂತ್ರವನ್ನು ಅರಿತು ಅವರ ಯೋಜನೆಯನ್ನು ವಿಫಲಗೊಳಿಸುವಂತೆ ಉಡುಪಿ ಜಿಲ್ಲಾ ಸಿಪಿಐಎಂ ಜಿಲ್ಲೆಯ ಜನತೆಗೆ ಕರೆ ನೀಡಿದೆ.

ಕುಂದಾಪುರದಲ್ಲಿ ಅ.19ರಂದು ನಡೆದ ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಈ ಗೊತ್ತುವಳಿಯನ್ನು ಅಂಗೀಕರಿಸ ಲಾಯಿತು. ಹಿಂದಿನ ಜಿಲ್ಲಾಧಿಕಾರಿಯವರ ಮೇಲೆ ರಾಜಕೀಯ ಪ್ರಭಾವ ಬೀರಿ, ಉಡುಪಿ ಕಲ್ಮತ್ ಮಸೀದಿಯ ಜಾಗವನ್ನು ಸರಕಾರಿ ಜಾಗ ಎಂದು ಘೋಷಿಸಿ, ಅಲ್ಲಿ 35 ವರ್ಷಗಳಿಂದ ನಡೆಯುತ್ತಿದ್ದ ನಮಾಜನ್ನು ನಿಲ್ಲಿಸಲಾಗಿದೆ ಎಂದು ಸಿಪಿಎಂ ತಿಳಿಸಿದೆ.

ಕಾರ್ಕಳ ತಾಲೂಕಿನ ನಕ್ರೆಯಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರದ ಮೇಲೆ ದಾಳಿ, ಸಾಬ್ರಕಟ್ಟೆಯಲ್ಲಿ ಮತಾಂತರ ನೆಪವೊಡ್ಡಿ, ಕೋಟ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ, ಗಂಗೊಳ್ಳಿಯಲ್ಲಿ ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮರ ಹಾಗೂ ಪೈಗಂಬರರ ವಿರುದ್ಧ ಅವಹೇಳನಕಾರಿ ಘೋಷಣೆ, ಉಡುಪಿಯಲ್ಲಿ ದುರ್ಗಾ ದೌಡ್‌ನಲ್ಲಿ ಸಚಿವರು, ಶಾಸಕರ ಸಮ್ಮುಖದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾಯದರ್ರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ತೆರೆಯ ಮರೆಯಲ್ಲಿ ನಡೆಯುತ್ತಿದ್ದ ಸಂಚು ಇದೀಗ ಸಾರ್ವಜನಿಕವಾಗಿ ಮುನ್ನೆಲೆಗೆ ಬಂದಿದೆ. ಕರೋನ ಸಂದರ್ಭವನ್ನು ನಿರ್ವಹಿಸಿದ ರೀತಿ, ಅಪಾರ ಸಾವು ನೋವು, ಆಕ್ಸಿಜನ್ ಕೊರತೆ, ಖಾಸಗಿ ಆಸ್ಪತ್ರೆಗಳ ಸುಲಿಗೆ, ಪೆಟ್ರೋಲ್, ಡೀಸಿಲ್, ಅಡುಗೆ ಅನಿಲ ಸೇರಿದಂತೆ ಎಲ್ಲಾ ಅವಶ್ಯಕ ಸಾಮಗ್ರಿಗಳ ಬೆಲೆಯಲ್ಲಿ ವಿಪರೀತ ಹೆಚ್ಚಳ, ಕಾರ್ಖಾನೆಗಳ ಮತ್ತು ಖಾಸಗೀ ಸಂಸ್ಥೆಗಳ ಮುಚ್ಚುವಿಕೆಯಿಂದ ಉಂಟಾದ ನಿರುದ್ಯೋಗ, ಜನರಿಗೆ ಪರಿಹಾರ ನೀಡುವಲ್ಲಿ ಕೊರತೆ ಮತ್ತು ವಿಫಲತೆ ಕಾರಣಗಳಿಂದ ಜನತೆ ಬೇಸತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.

ಇಂತಹ ಕಷ್ಟಕಾಲದಲ್ಲಿ ಖಾಸಗಿ ಸಂಸ್ಥೆಗಳು ಜನರ ಸುಲಿಗೆಗೆ ಮುಂದಾಗಿವೆ. ಉಡುಪಿ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾಗಿರುವ ಕುಯಿಲಾಡಿ ಸುರೇಶ್ ನಾಯಕ್‌ರ ಅಧ್ಯಕ್ಷತೆಯಲ್ಲಿರುವ ಖಾಸಗಿ ಬಸ್ ಮಾಲಕರ ಸಂಘವು ಶೇ.25ರಷ್ಟು ಬಸ್ ಪ್ರಯಾಣದರ ಏರಿಕೆ ಮಾಡುತ್ತೇವೆ ಎಂದು ಹೇಳಿ ಶೇ.50ರ ವರೆಗೂ ಪ್ರಯಾಣ ದರ ಹೆಚ್ಚಳ ಮಾಡಿದೆ. ಇಂತಹ ಹಗಲು ದರೋಡೆಗಳ ವಿರುದ್ಧ ಜನರು ಐಕ್ಯತೆಯಿಂದ ಪ್ರತಿಭಟನೆ, ಚಳುವಳಿ ನಡೆಸಬಾರದೆಂಬ ಉದ್ದೇಶದಿಂದ ಒಡೆದು ಆಳುವ ವಿಷದ ಬೀಜ ಬಿತ್ತುವುದಕ್ಕಾಗಿ ಕೋಮು ಭಾವನೆ ಕೆರಳಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಈ ಮೂಲಕ ಜನರ ಐಕ್ಯತೆಗೆ ಕುಂದು ಉಂಟಾಗುತ್ತಿದೆ. ಜಿಲ್ಲೆಯ ಜನತೆ ಇದನ್ನು ಮನಗಂಡು, ಜನರನ್ನು ಒಡೆಯುವ ಘೋಷಣೆ ಗಳಿಗೆ ಮಾರು ಹೋಗದೆ, ಬೆಲೆ ಏರಿಕೆ, ನಿರುದ್ಯೋಗ, ಆದಾಯ ಕುಂಠಿತ ಮೊದಲಾದ ದಿನನಿತ್ಯದ ಸಮಸ್ಯೆಗಳಿಗೆ ಐಕ್ಯತೆಯಿಂದ ಹೋರಾಡಲು ಮುಂದೆ ಬರಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News