ಮಹರ್ಷಿ ವಾಲ್ಮೀಕಿ ಸಾಧನೆ ಎಲ್ಲರಿಗೂ ಪ್ರೇರಣೆ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಅ.20: ಬೇಡನಾಗಿದ್ದ ವ್ಯಕ್ತಿ ತನ್ನ ಸತತ ಪರಿಶ್ರಮ, ಅಚಲ ವಿಶ್ವಾಸ ಹಾಗೂ ಸಾಧನೆಗಳಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡಿದ್ದು, ಅವರ ಈ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಉಡುಪಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮಹರ್ಷಿ ವಾಲ್ಮೀಕಿ ರಚನೆಯ ರಾಮಾಯಣವು ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯಿಂದ ಕೂಡಿದ್ದು, ವಿವಿಧ ಭಾಷೆಗಳಿಗೆ ಭಾಷಾಂತರಗೊಂಡು, ಧಾರಾವಾಹಿ-ಚಲನಚಿತ್ರಗಳ ಮೂಲಕ ಪ್ರತಿಯೊಬ್ಬರ ಮನೆಮನಗಳನ್ನು ಮುಟ್ಟಿದೆ. ರಾಮಾಯಣದ ಮೌಲ್ಯಗಳು, ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತ ವಾಗಿವೆ. ಸತತ ಪರಿಶ್ರಮದಿಂದ ಯಾವುದೇ ವ್ಯಕ್ತಿ ಮಹಾನ್ ಸಾಧನೆ ಮಾಡ ಬಹುದು ಎಂಬುದಕ್ಕೆ ವಾಲ್ಮೀಕಿ ಸಾಕ್ಷಿಯಾಗಿದ್ದಾರೆ ಎಂದವರು ಹೇಳಿದರು.
ಉಡುಪಿ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮ ಆರಂಭವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ, ಪರಿಶಿಷ್ಟ ಪಂಗಡದ ಅಭಿವೃಧ್ದಿಗೆ ಸರಕಾರ ರೂಪಿಸಿರುವ ಯೋಜನೆಗಳ ಪ್ರಯೋಜನವನ್ನು ಪರಿಶಿಷ್ಟ ಪಂಗಡದ ಜನತೆ ಪಡೆಯಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ, ಅತ್ಯಂತ ಹಿಂದುಳಿದ ವರ್ಗದ ವ್ಯಕ್ತಿ ಜ್ಞಾನ ಪಡೆಯುವ ಮೂಲಕ ಆದಿ ಕವಿ ವಾಲ್ಮೀಕಿಯಾಗಿದ್ದಾರೆ. ಹಿಂದುಳಿದ ವರ್ಗದ ಜನತೆ ತಮ್ಮಲ್ಲಿನ ಕೀಳಿರಿಮೆ ತೊರೆದು, ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಮಹತ್ವದ್ದು ಎಂದರು.
ಮಹರ್ಷಿ ವಾಲ್ಮೀಕಿ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ಉಪನ್ಯಾಸ ನೀಡಿದ ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿ ದಿನಕರ ಕೆಂಜೂರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಚಿಂತಕ, ತತ್ವಜ್ಞಾನಿ, ಶಿಕ್ಷಣ ಪ್ರೇಮಿ ಯಾಗಿದ್ದರು. ರಾಮಾಯಣ ವನ್ನು ಜನಸಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ರಚಿಸಿದ್ದಾರೆ. ಅದರಲ್ಲಿ ಬರುವ ಪ್ರಕೃತಿ ಸೌಂದರ್ಯ, ಆದರ್ಶ ವ್ಯಕ್ತಿಯ ಚಿತ್ರಣ, ಕೌಟುಂಬಿಕ ವೌಲ್ಯಗಳು, ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಅಭಿವೃದ್ದಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ದೂದ್ ಪೀರ್ ಸ್ವಾಗತಿಸಿ, ವಿಶ್ವನಾಥ್ ವಂದಿಸಿದರು.
ಇದೇ ವೇಳೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಪ್ರತಿಭಾ ನಾಯ್ಕಾ, ಕಾವ್ಯಶ್ರೀ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶೀನ ನಾಯ್ಕ, ದೋಗು ಕೊರಗ, ಗುಲಾಬಿ ಗೌಡ್ತಿ ಇವರನ್ನು ಸನ್ಮಾನಿಸಲಾಯಿತು.