ರಾಹುಲ್ ಗಾಂಧಿ ವಿರುದ್ಧದ ಹೇಳಿಕೆ ಪ್ರಕರಣ; ಸಂಸದ ನಳಿನ್ ಕುಮಾರ್‌ಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ

Update: 2021-10-20 14:37 GMT

ಮಂಗಳೂರು, ಅ.20: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೋದಲ್ಲೆಲ್ಲ ಕಪ್ಪು ಬಾವುಟ ಹಿಡಿಯುವುದಾಗಿ ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್‌ ರಾಜ್ ಸಂಘಟನೆಯ ಅಧ್ಯಕ್ಷ ಶುಭೋದಯ ಆಳ್ವ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಡ್ರಗ್ಸ್ ತೆಗೆದುಕೊಂಡೇ ಚುನಾವಣಾ ಪ್ರಚಾರ ನಡೆಸುವಂತೆ ಕಾಣುತ್ತಿದೆ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಇವರ ದಂಧೆಯಾಗಿದೆ. ಅವರು ಮತ್ತೆ ಆರೆಸ್ಸೆಸ್ ಶಾಖೆಗೆ ಹೋಗಿ ಸಂಸ್ಕೃತಿಯನ್ನು ಕಲಿಯಲಿ ಎಂದು ಟೀಕಿಸಿದರು.

ಕರಾವಳಿಯಲ್ಲಿ ಸಂಸದರಾಗಿದ್ದ ಶ್ರೀನಿವಾಸ ಮಲ್ಯ, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್ ಜಿಲ್ಲೆಗೆ ಅನೇಕ ಯೋಜನೆಗಳು, ಕೈಗಾರಿಕೆಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೆ ಮೂರು ಸಲ ಎಂಪಿ ಆಗಿದ್ದ ನಳಿನ್ ಕುಮಾರ್ ಕೊಡುಗೆ ಏನು? ಯಾವ ಜನಪರ ಯೋಜನೆಗಳನ್ನು ತಂದಿದ್ದಾರೆ ಎಂದು ಶುಭೋದಯ ಆಳ್ವ ಪ್ರಶ್ನಿಸಿದರು.

ನಳಿನ್ ಕುಮಾರ್ ಯಾವ ಬಿಲ್ಡಿಂಗ್ ಕಟ್ಟಿದ್ದಾರೆ ಗೊತ್ತಿದೆ. ಬೆಂಗಳೂರಿನ ಆನಂದರಾವ್ ಸರ್ಕಲ್‌ನಲ್ಲಿ ಏನು ಮಾಡುತ್ತಿದ್ದರು ಗೊತ್ತಿದೆ. ಸಮಯ ಬಂದಾಗ ಬಹಿರಂಗಗೊಳಿಸುತ್ತೇವೆ. ಜನರಿಗೆ ಅವರ ಅನೈತಿಕ ವ್ಯವಹಾರಗಳನ್ನು ತಿಳಿಸುತ್ತೇವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡರಾದ ನೀರಜ್‌ಪಾಲ್, ಗಣೇಶ್ ಪೂಜಾರಿ, ಟಿ.ಕೆ. ಸುಧೀರ್, ಯೋಗೀಶ್ ಕುಮಾರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News