ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಹಿಂಸಾಚಾರ ಪ್ರಕರಣ: ಸ್ಟೀವ್ ಬ್ಯಾನನ್ ವಿರುದ್ಧ ಕಾನೂನುಕ್ರಮಕ್ಕೆ ಶಿಫಾರಸು

Update: 2021-10-20 16:52 GMT
photo:twitter/@ABC7

ವಾಷಿಂಗ್ಟನ್, ಅ.20: ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಹಿಲ್ಸ್ ನಲ್ಲಿ  ನಡೆದಿದ್ದ ಹಿಂಸಾಚಾರ ಮತ್ತು ದೊಂಬಿ ಪ್ರಕರಣದ ತನಿಖೆ ನಡೆಸುತ್ತಿರುವ ಅಮೆರಿಕ ಸಂಸತ್ತಿನ ಸ್ಥಾಯೀ ಸಮಿತಿಯು ಮಾಜಿ ಅಧ್ಯಕ್ಷ ಟ್ರಂಪ್ ರ ಸಲಹೆಗಾರರಾಗಿದ್ದ ಸ್ಟೀವ್ ಬ್ಯಾನನ್ ಸಮಿತಿಯ ಎದುರು ವಿಚಾರಣೆಗೆ ಹಾಜರಾಗಲು ನಿರಾಕರಿಸಿರುವುದರಿಂದ ಅವರ ವಿರುದ್ಧ ಕಾನೂನುಕ್ರಮಕ್ಕೆ ಶಿಫಾರಸು ಮಾಡುವ ಪ್ರಸ್ತಾವನೆಯನ್ನು ಅನುಮೋದಿಸಿದೆ ಎಂು ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.


ಸಮಿತಿಯ ಎದುರು ಹಾಜರಾಗಿ ಹೇಳಿಕೆ ನೀಡುವಂತೆ ಹಲವು ಬಾರಿ ನೀಡಿದ್ದ ಸಮನ್ಸ್ ಅನ್ನು ಬ್ಯಾನನ್ ತಿರಸ್ಕರಿಸಿರುವುದರಿಂದ ಅವರ ವಿರುದ್ಧ ಸದನದ ನಿಂದನೆಗಾಗಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವ ಬಗ್ಗೆ ಸರ್ವಾನುಮತದ ನಿರ್ಧಾರಕ್ಕೆ ಬರಲಾಗಿದೆ. ಗುರುವಾರ ಬ್ಯಾನನ್ ಗೆ ಶಿಕ್ಷೆ ವಿಧಿಸುವ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಬೆನ್ನೀ ಥಾಮ್ಸನ್ ಹೇಳಿದ್ದಾರೆ. ಕ್ಯಾಪಿಟಲ್ ಹಿಂಸಾಚಾರ ಪ್ರಕರಣದ ತನಿಖೆಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಬ್ಯಾನನ್ ಪಾತ್ರ ವಹಿಸಿದ್ದರು. ಜೋ ಬೈಡನ್ ಗೆಲುವು ಘೋಷಣೆಯನ್ನು ವಿರೋಧಿಸಿ ರಚನೆಯಾದ ‘ಸ್ಟಾಪ್ ದಿ ಸ್ಟೀಲ್’ ಎಂಬ ಗುಂಪು ಅಭಿಯಾನದ ರೂವಾರಿಯಾಗಿದ್ದು ಇದರಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ. ಈ ಗುಂಪು ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆಸಲು ಜನರಿಗೆ ಪ್ರಚೋದಿಸಿದೆ ಎಂದು ಸಮಿತಿ ಹೇಳಿದೆ.

ಜನವರಿ 6ರಂದು ದಾಳಿ ನಡೆಯುವ ಬಗ್ಗೆ ಬ್ಯಾನನ್ ಗೆ ಮೊದಲೇ ತಿಳಿದಿತ್ತು ಎಂದು ಸಮಿತಿಯ ಉಪಾಧ್ಯಕ್ಷ ಲಿಝ್ ಚೆನೆ ಹೇಳಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂರಾರು ಬೆಂಬಲಿಗರು ಜನವರಿ 6ರಂದು ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಕಟ್ಟಡದ ಮೇಲೆ ನುಗ್ಗಿಬಂದಿದ್ದರು. ತಡೆಯಲು ಯತ್ನಿಸಿದ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು ಈ ಹಿಂಸಾಚಾರದಲ್ಲಿ 5 ಮಂದಿ ಮೃತಪಟ್ಟಿದ್ದರು. ದೊಂಬಿಗೆ ಸಂಬಂಧಿಸಿದಂತೆ ಕನಿಷ್ಟ 68 ಮಂದಿಯನ್ನು ಬಂಧಿಸಲಾಗಿತ್ತು. ನಿಂದನೆ ಆರೋಪ ನ್ಯಾಯಾಲಯದಲ್ಲಿ ಸಾಬೀತಾದರೆ ಬ್ಯಾನನ್ಗೆ 1 ವರ್ಷ ಫೆಡರಲ್ ಜೈಲಿನಲ್ಲಿ ಶಿಕ್ಷೆ, ಅಥವಾ ಸುಮಾರು 1 ಲಕ್ಷ ಡಾಲರ್ (ಸುಮಾರು 74 ಲಕ್ಷ ರೂ.) ದಂಡ ಅಥವಾ 2ನ್ನೂ ವಿಧಿಸಬಹುದು.

ಮೆಕ್ಸಿಕನ್ ಗಡಿಯುದ್ದಕ್ಕೂ ತಡೆಗೋಡೆ ನಿರ್ಮಿಸುವ ವಿವಾದಾತ್ಮಕ ‘ವಿ ಬಿಲ್ಡ್ ದಿ ವಾರ್’ ಅಭಿಯಾನದಲ್ಲೂ ಬ್ಯಾನನ್ ಮುಂಚೂಣಿಯಲ್ಲಿದ್ದರು. ಆದರೆ ಅಧಿಕಾರದಿಂದ ನಿರ್ಗಮಿಸುವ ಕೆಲ ದಿನಗಳ ಮೊದಲು ಟ್ರಂಪ್ ಈ ಪ್ರಕರಣದಲ್ಲಿ ಬ್ಯಾನನ್ ಗೆ ಕ್ಷಮಾದಾನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News