ದ.ಕ ಜಿಲ್ಲೆಯವರು ಸರಕಾರಿ ಉದ್ಯೋಗ, ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಕಡಿಮೆ ಹಾಜರಾಗುತ್ತಾರೆ: ಕಮಿಷನರ್ ಶಶಿಕುಮಾರ್

Update: 2021-10-20 17:07 GMT

ಬೆಳ್ತಂಗಡಿ: ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಯಾವುದೇ ವಿದ್ಯಾಭ್ಯಾಸವೇ ಇರಲಿ ಅನಾವಶ್ಯಕವಾಗಿರುವುದನ್ನು ಹೆಚ್ಚು ಓದುವ ಬದಲು ಅಗತ್ಯವಿರುವುದನ್ನು ಮಾತ್ರ ನಿಖರವಾಗಿ ಓದಬೇಕು. ದ.ಕ ಜಿಲ್ಲೆಯವರು ಸರಕಾರಿ ಉದ್ಯೋಗ ಮತ್ತು ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಕಡಿಮೆ ಹಾಜರಾಗುತ್ತಾರೆ. ಆ ನಿಟ್ಟಿನಲ್ಲಿ ಇಲ್ಲಿನ‌ ಯುವಜನತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಂದಿನ 15 ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಲಿಕಾ ಕೇಂದ್ರ ಆರಂಭ ಮಾಡಲಿದ್ದೇವೆ ಎಂದು ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಹೇಳಿದರು. 

ಬೆಸ್ಟ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಬೆಳ್ತಂಗಡಿಯಲ್ಲಿ ಐಎಎಸ್, ಐಪಿಎಸ್, ಬ್ಯಾಂಕಿಂಗ್ ನಂತಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವತಯಾರಿ ತರಬೇತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಬೆಳ್ತಂಗಡಿಯ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಐಎಎಸ್, ಐಪಿಎಸ್ ತರಬೇತಿ ಎಂಬುದು ಶೋಕಿ ಅಲ್ಲ. ಯಾಕೆಂದರೆ ಅದೊಂದು ಕೋರ್ಸ್ ಅಲ್ಲ. ಈ ಪರೀಕ್ಷೆ ಎದುರಿಸಲು ಉನ್ನತ ಅಂಕಗಳೇ ಬೇಕೆಂದಿಲ್ಲ. 60-70 ಶೇಕಡಾ ಅಂಕ ಪಡೆಯುವ ಸಾಮರ್ಥ್ಯ ಇದ್ದರೆ, 6-8 ಗಂಟೆ ಓದುವ ಗುರಿ ಇದ್ದರೆ, ದೂರದರ್ಶನ, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವ ಕುತೂಹಲ ಇವುಗಳು ಇದ್ದರೆ ಸಾಕಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ಯುವಜನತೆ ದೇಶದ ಆಸ್ತಿ, 
ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು, ಸರಕಾರಿ ಶಾಲೆಯಲ್ಲಿ ಓದಿದವರು ಎಂಬ ಕೀಳರಿಮೆ ಬೇಕಾಗಿಲ್ಲ. ಎಲ್ಲಾ ಸಾಧನೆಗಳನ್ನು ಮಾಡಿದವರೆಲ್ಲರೂ ಇಂತಹದ್ದೇ ಮೂಲದಿಂದ ಬಂದವರು ಎಂಬುದು ಉಲ್ಲೇಖಾರ್ಹ ಎಂದರು.

ನಮ್ಮಲ್ಲಿ ಮೀಸಲಾತಿ ಎಂಬುದು ಇನ್ನೂ ಕೆಲವರಿಗೆ ಅರಿವು ಇಲ್ಲ. ಮೀಸಲಾತಿ ಎಂಬುದು ದೌರ್ಬಲ್ಯ ಅಲ್ಲ. ಅದು ನಮ್ಮ ಹಕ್ಕು. ಅದನ್ನು ಬಳಸಿಕೊಂಡು ನಮ್ಮ ಉದ್ಯೋಗವನ್ನು ಪಡೆದುಕೊಳ್ಳಬೇಕು. ಮುಂದಕ್ಕೆ ಮೀಸಲಾತಿ ಬಗ್ಗೆಯೂ ಜಾಗೃತಿ ಮೂಡಿಸಲು ಮುಂದಕ್ಕೆ ಅರ್ಹ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿ ದೊರೆಯುವಂತೆ ಮಾಡುತ್ತೇವೆ ಎಂದರು 

ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಯ ಪ್ರಸಾರ ವಿಭಾಗದ ಮುಖ್ಯಸ್ಥ ಪ್ರಕಾಶ್ ನಾಯಕ್, ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.‌ಬಿ.ಎ ಕುಮಾರ್ ಹೆಗ್ಡೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕುಮಾರ್ ಹೆಗ್ಡೆ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಬೆಸ್ಟ್ ಫೌಂಡೇಶನ್ ಸಲಹೆಗಾರ ನಾಮದೇವ ರಾವ್ ಮುಂಡಾಜೆ ಸ್ವಾಗತಿಸಿದರು.  ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ಗುರಿಪಳ್ಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News