ಕೊಲೈಪಿಕ್ ಹಿಮಶಿಖರ ಏರಿ ಕಾರವಾರ ತಲುಪಿದ ಐವರು ಕನ್ನಡತಿಯರು

Update: 2021-10-20 17:39 GMT

ಕಾರವಾರ, ಅ.20: ಐವರು ಕನ್ನಡತಿಯರು 5,425 ಮೀಟರ್ ಎತ್ತರದ ಕೊಲೈಪಿಕ್ ಹಿಮಶಿಖರ ಏರಿ ಲಡಾಕ್‌ನಿಂದ 3,350 ಕಿ.ಮೀ. ಸೈಕ್ಲೀಂಗ್ ಮೂಲಕ ಕಾರವಾರ ತಲುಪಿದ್ದು, ಗುರುವಾರ ಕಾರವಾರದಿಂದ ಮಂಗಳೂರಿನವರೆಗೆ 300 ಕಿ.ಮೀ. ಕಯಾಕಿಂಗ್ ಮೂಲಕ ತೆರಳಲು ಸಜ್ಜಾಗಿದ್ದಾರೆ.

ಮೈಸೂರು ಮೂಲದ ಬಿಂದು ನೇತೃತ್ವದಲ್ಲಿ ಶಿಮೊಗ್ಗದ ಧನಲಕ್ಷ್ಮೀ, ಐಶ್ವರ್ಯಾ, ಬೆಂಗಳೂರಿನ ಆಶಾ, ಕೊಡಗು ಮೂಲದ ಪುಷ್ಪಾಈ ಸಾಹಸಕ್ಕೆ ಮುಂದಾಗಿದ್ದಾರೆ.

ಕರ್ನಾಟಕ ಸರಕಾರದ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಷನ್, ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡಮಿ ಸಹಕಾರದೊಂದಿಗೆ ಈ ಐವರು ಯುವತಿಯರು ಸಾಗರದಿಂದ ಶಿಖರದೆಡೆಗೆ ಯಾತ್ರೆ ಕೈಗೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯುವತಿಯರು, ಆ. 17ರಂದು ಬೆಂಗಳೂರಿನಿಂದ ಹೊರಟು ಆ. 22ರಂದು ಕಾಶ್ಮೀರ ಬಳಿಯ 5,425 ಮೀಟರ್ ಎತ್ತರದ ಕೊಲೈಪಿಕ್ ಶಿಖರ ಏರಿದ್ದೆವು. ಇಲ್ಲಿ ವೀಪರಿತ ಶೀತದ ಜೊತೆಗೆ ಉಸಿರಾಡುವುದಕ್ಕೂ ಕಷ್ಟದ ಸ್ಥಿತಿ ಇತ್ತು. ಬಳಿಕ ಅಲ್ಲಿಂದ ಲಡಾಕ್‌ಗೆ ಆಗಮಿಸಿ ನಂತರ 3,350 ಕಿ.ಮೀ. ಸೈಕ್ಲಿಂಗ್ ಮಾಡಿಕೊಂಡು ಬಂದು ಕಾರವಾರ ತಲುಪಿದ್ದೇವೆ. ಈ ವೇಳೆ ಸಾಕಷ್ಟು ಎತ್ತರದ ರಸ್ತೆಗಳನ್ನು ಏರಿ ಬಿಸಿಲು ಮಳೆಯನ್ನು ಲೆಕ್ಕಿಸದೆ ಕಾರವಾರ ತಲುಪಿದ್ದೇವೆ. ಈ ವೇಳೆ ಸಾಕಷ್ಟು ರಾಜ್ಯಗಳನ್ನು ವಿಭಿನ್ನ ಸಂಸ್ಕೃತಿ, ಜನರನ್ನು ನೋಡಿದ್ದೇವೆ. ಶಿಖರ ಏರಿರುವುದು ಮತ್ತು ಸೈಕ್ಲಿಂಗ್ ಮಾಡಿರುವುದು ಎರಡು ಕೂಡ ಉತ್ತಮ ಅನುಭವ ನೀಡಿದೆ. ಇದೀಗ ಅರಬ್ಬಿ ಸಮುದ್ರದಲ್ಲಿ 300 ಕಿ.ಮೀ. ಕಯಾಕಿಂಗ್ ಮೂಲಕ ಮಂಗಳೂರು ತಲುಪುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ ಸಾಹಸಿ ಯುವತಿ ಬಿಂದು.

ಇನ್ನು ಸದಾಶಿವಗಡದ ಜಂಗಲ್ ರೆಸಾರ್ಟ್ ಬಳಿ ಬುಧವಾರ ವಾಲ್ಮೀಕಿ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಸಿಇಒ ಪ್ರಿಯಾಂಗಾ ಎಂ. ಸಾಹಸಿ ಯುವತಿಯರ ಕಯಾಕಿಂಗ್ ಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾಧಿಕಾರಿ ಸಾಧನೆ ಯೆಡೆಗೆ ಹೆಜ್ಜೆ ಹಾಕುವಾಗ ಕೆಟ್ಟ ಯೋಚನೆಗಳು ಬರುವುದು ಸಹಜ. ಆದರೆ, ಅದನ್ನು ಧೈರ್ಯವಾಗಿ ಎದುರಿಸಿ ಛಲದಿಂದ ಮುನ್ನುಗ್ಗಿ ದಾಗ ಗುರಿ ತಲುಪಲು ಸಾಧ್ಯವಿದೆ. ನೀವು ಕೈಗೊಂಡ ಸಾಹಸಿ ಚಟುವಟಿಕೆ ಇತರ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಲಿದೆ ಎಂದು ಶುಭ ಹಾರೈಸಿದರು.

ಐವರು ಯುವತಿಯರು ಪರ್ವತ ಏರಿ 46 ದಿನಗಳ ಕಾಲ ಹಲವು ರಾಜ್ಯಗಳಲ್ಲಿ ಸೈಕ್ಲಿಂಗ್ ಮೂಲಕ ಕಾರವಾರ ತಲುಪಿದ್ದು, ಇಲ್ಲಿಂದ ಮಂಗಳೂರಿಗೆ ಕಯಾಕಿಂಗ್ ಕೈಗೊಳ್ಳುತ್ತಿರುವುದು ದೊಡ್ಡ ಸಾಹಸ. ರಾಜ್ಯಕ್ಕೆ ಹೆಮ್ಮೆ ತಂದು ಕೊಡುವಂತಹ ಸಾಹಸ ಯುವತಿಯರಿಂದ ಆಗಿದೆ. ಅಲ್ಲದೆ, ಇತರೆ ಮಕ್ಕಳಿಗೂ ಇದು ಸ್ಪೂರ್ತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News