ಅನೈತಿಕ ಪೊಲೀಸ್‌ಗಿರಿ ಬಗ್ಗೆ ಮುಖ್ಯಮಂತ್ರಿ ಸಮರ್ಥನೆ ಸರಿಯಲ್ಲ: ವೆಲ್‌ಫೇರ್ ಪಾರ್ಟಿ

Update: 2021-10-21 09:08 GMT

ಮಂಗಳೂರು, ಅ.21: ಅನೈತಿಕ ಪೊಲೀಸ್‌ಗಿರಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮರ್ಥನೆ ಸರಿಯಲ್ಲ. ಅನೈತಿಕ ಪೊಲೀಸ್‌ ಗಿರಿ ನಡೆಸಲು ಸಂವಿಧಾನದಲ್ಲಿ ಅವಕಾಶವಿದೆಯೇ ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೈನ್ ಪ್ರಶ್ನಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಅಮಾಯಕ ಯುವಕ-ಯುವತಿಯರಿಗೆ ಕಿರುಕುಳ ನೀಡುವ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಗಳು ಅದಕ್ಕೆ ಕಡಿವಾಣ ಹಾಕುವ ಬದಲು ಇನ್ನಷ್ಟು ಪ್ರೋತ್ಸಾಹ ನೀಡುವ ರೀತಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ. ಸಮಾಜದಲ್ಲಿ ದ್ವೇಷ ಹರಡುವುದನ್ನು ಅವರು ಸಮರ್ಥಿಸಿಕೊಳ್ಳಬಾರದು ಎಂದು ಹೇಳಿದರು.

ದೇಶದಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ನೂರರ ಗಡಿ ದಾಟಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕನಿಷ್ಠ ಮಟ್ಟದಲ್ಲಿ ಇದ್ದಾಗಲೂ ಕೇಂದ್ರ ಸರಕಾರವು ಅವೈಜ್ಞಾನಿಕವಾಗಿ ಪೆಟ್ರೋಲ್-ಡಿಸೇಲ್ ದರ ಏರಿಕೆಮಾಡುತ್ತಿರುವುದು ದೇಶದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಜನರ ಸಮಸ್ಯೆಗಳ ಬಗ್ಗೆ ಗಂಭೀರತೆ ತೋರಿಸುವ ಬದಲು ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸದಸ್ಯತ್ವ ನೋಂದಣಿ ಅಭಿಯಾನ ಅ.15ರಿಂದ ಆರಂಭವಾಗಿ ಅ.31ರವರೆಗೆ ನಡೆಯಲಿದೆ. ಮೌಲ್ಯಾಧಾರಿತ ರಾಜಕೀಯದೊಂದಿಗೆ, ಭಾರತದ ಆರು ಸಾವಿರ ಗ್ರಾಮಗಳನ್ನು ಕಲ್ಯಾಣ ಗ್ರಾಮ ಮಾಡುವ ಕನಸು ನಮ್ಮದು. ಮನೆ ಮನೆ ಭೇಟಿ ನೀಡಿ ಸದಸ್ಯತ್ವ ನೋಂದಣಿಅಭಿಯಾನ ಕಾರ್ಯ ನಡೆಯಲಿದೆ ತಾಹೀರ್ ಹುಸೈನ್ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಶ್ರೀಕಾಂತ್ ಸಾಲ್ಯಾನ್, ಮುತಾಲಿಬ್, ಸರ್ರಾಜ್, ಮರಿಯಂ ಶಹೀರಾ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News