‘ನಕ್ಸಲ್’ ಸಂಬಂಧ ಆರೋಪ ಪ್ರಕರಣ: ವಿಠಲ ಮಲೆಕುಡಿಯ, ಲಿಂಗಣ್ಣ‌ ಮಲೆಕುಡಿಯ ನಿರ್ದೋಷಿ

Update: 2021-10-21 10:20 GMT
ವಿಠಲ ಮಲೆಕುಡಿಯ

ಮಂಗಳೂರು: ನಕ್ಸಲ್ ಚಟುವಟಿಕೆಯ ಸಂಬಂಧ ಹೊಂದಿದ್ದಾಗಿ ಆರೋಪಿಸಿ ಬಂಧಿಸಲ್ಪಟ್ಟು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ವಿಠಲ ಮಲೆಕುಡಿಯ ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ನ್ಯಾಯಾಲಯವು ಇಬ್ಬರನ್ನು ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ.

ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ, ಅವರ ತಂದೆ ಲಿಂಗಣ್ಣ ಮಲೆಕುಡಿಯ ನಿರ್ದೋಷಿಗಳು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಬಿ. ಜಕಾತಿ ಈ ತೀರ್ಪು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿಯಾಗಿದ್ದ ವಿಠಲ ಮಲೆಕುಡಿಯ ಅವರನ್ನು 2012ರ ಮಾರ್ಚ್ 3ರಂದು ನಕ್ಸಲ್ ನಿಗ್ರಹ ದಳವು ಬಂಧಿಸಿತ್ತು. ಬಳಿಕ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ವಿಠಲ ಮಲೆಕುಡಿಯ ಅವರನ್ನು 6ನೇ ಆರೋಪಿಯನ್ನಾಗಿ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು 7ನೇ ಆರೋಪಿಯನ್ನಾಗಿಸಲಾಗಿತ್ತು. ಬಂಧನದ ವೇಳೆ ವಿಠಲ ಮಲೆಕುಡಿಯ ಅವರ ಬಳಿ ಇದ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಜೈಲಿನಿಂದ ಬಿಡುಗಡೆಗೊಂಡ ಸಮಯದಲ್ಲಿ ವಿಠಲ ಮಲೆಕುಡಿಯ ಹೇಳಿದ್ದರು.

ಬಂಧನ ಸಮಯದಲ್ಲಿ ವಿಠಲ ಮಲೆಕುಡಿಯ ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. ಜೈಲಿನಲ್ಲಿದ್ದ ಸಮಯದಲ್ಲಿ ಪರೀಕ್ಷೆಗೆ ಹಾಜರುಪಡಿಸಿದ್ದ ಪೊಲೀಸರು, ಕೈಕೊಳ ತೊಟ್ಟು ಪರೀಕ್ಷೆ ಬರೆಯುವಂತೆ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News