ಪುತ್ತೂರು: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ; ಆರೋಪಿ ಆರೆಸ್ಸೆಸ್ ಮುಖಂಡನ ಬಂಧನಕ್ಕೆ ಆಗ್ರಹಿಸಿ ಧರಣಿ

Update: 2021-10-21 13:05 GMT

ಪುತ್ತೂರು: ಬಡಗನ್ನೂರು ಗ್ರಾಮದ ದಲಿತ ಬಾಲಕಿಯ ಅತ್ಯಾಚಾರ ನಡೆಸಿ ಮಗುವಿನ ಜನನಕ್ಕೆ ಕಾರಣವಾದ ಆರೋಪಿ ಆರೆಸ್ಸೆಸ್ ಮುಖಂಡನನ್ನು ಬಂಧಿಸಬೇಕು ಹಾಗೂ ಪ್ರಕರಣವನ್ನು ತಿರುಚಿ ಆರೋಪಿಯ ರಕ್ಷಣೆಗೆ ನಿಂತ ಸಂಪ್ಯ ಪೊಲೀಸರನ್ನು ಅಮಾನತು ಮಾಡುವಂತೆ ಆಗ್ರಹಿಸಿ ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಗುರುವಾರ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆ ನಡೆಯಿತು. ಒಂದು ವಾರದ ಒಳಗಾಗಿ ಆರೋಪಿಯನ್ನು ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.  

ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪ್ರತಿಭಟನೆಯನ್ನು ಉದ್ಘಾಟಿಸಿದ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಉಪ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಹಣದ ಆಮಿಷಕ್ಕೆ ಒಳಗಾಗಿ ಆರೋಪಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಸಂತ್ರಸ್ಥೆಯ ಸಹೋದರನನ್ನು ಜೈಲಿಗೆ ಹಾಕಿದ್ದಾರೆ. ಆರೋಪಿಯ ರಕ್ಷಣೆಗೆ ಬೆಂಬಲ ನೀಡುವ ಪೊಲೀಸರನ್ನು ಅಮಾನತು ಮಾಡುವುದಾಗಿ ಭರವಸೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ನಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. 

ಮೊಗೇರರ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ವಿಶ್ವನಾಥ ಬೆಂಗಳೂರು ಮಾತನಾಡಿ, ಘಟನೆ ನಡೆದು ಒಂದೂವರೆ ತಿಂಗಳಾದರೂ ಇನ್ನೂ ಪ್ರಕರಣ ದಾಖಲಿಸಲಾಗಿಲ್ಲ. ಈ ತನಕ ಆರೋಪಿಯ ವಿಚಾರಣೆಯನ್ನೂ ನಡೆಸಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು, ಇಲ್ಲಿನ ಶಾಸಕರು ಘಟನೆಯ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಕರಣದ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು ಅನುಮಾನಗಳಿಗೆ ಎಡೆಮಾಡಿದೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಕೂಡಾ ಈ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ, ಆರೆಸ್ಸೆಸ್ ನವರು ಒಳ್ಳೆಯವರೇ ಆಗಿದ್ದರೆ ಆರೆಸ್ಸೆಸ್ ಮತ್ತು ಬಿಜೆಪಿಯ ಮುಖಂಡ ಅತ್ಯಾಚಾರಿ ನಾರಾಯಣ ರೈಯನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು. 

ಸಮನ್ವಯ ಸಮಿತಿ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಮಾತನಾಡಿ, ತೋಟದ ಕೆಲಸಕ್ಕೆ ಬಂದ ಬಡ ದಲಿತ ಬಾಲಕಿಯನ್ನು ನಾರಾಯಣ ರೈ ನಿರಂತರ ಅತ್ಯಾಚಾರ ನಡೆಸಿದ್ದು, ಆಕೆ 4 ತಿಂಗಳ ಗರ್ಭಿಣಿ ಎಂದು ತಿಳಿದ ಬಳಿಕ ಮಾತ್ರೆ ತಂದುಕೊಟ್ಟಿದ್ದಾನೆ. ಅಲ್ಲದೆ ಆಕೆಗೆ ಮೊಬೈಲ್ ನೀಡಿ, ಅದಕ್ಕೆ ಕರೆಮಾಡಿ ಹಿಂಸೆ ನೀಡಿದ್ದಾನೆ. ಗರ್ಭಿಣಿ ಎಂದು ತಿಳಿದರೂ ಪ್ರತಿದಿನ ಅತ್ಯಾಚಾರ ಎಸಗಿದ್ದಾನೆ. ಆದರೆ ಘಟನೆಯು ನಂತರ ಹೊಸ ತಿರುವು ಪಡೆದುಕೊಂಡಿದೆ. ಆಕೆಯ ಹೇಳಿಕೆ, ಕೇಸಿನಲ್ಲಿ ತಿಳಿಸಲಾದ ಲೊಕೇಶನ್ ಬದಲಾಗಿದೆ. ಪ್ರಮೋದ್ ಎಂಬಾತನನ್ನು ಕೇಸಿನಲ್ಲಿ ತೋರಿಸಿ ಠಾಣೆಗೆ ಆತನ್ನು ಕರೆಯಿಸಿ ವಿಚಾರಿಸಿ ಕಳುಹಿಸಿದ್ದಾರೆ. ಊಟ ನೀಡುವ ನೆಪದಲ್ಲಿ ಸಂತ್ರಸ್ಥೆಯ ಅಣ್ಣನನ್ನು ಠಾಣೆಗೆ ಕರೆಸಿಕೊಂಡು ಬಂಧಿಸಲಾಗಿದೆ. ಪ್ರಕರಣ ಆರೋಪಿ 70ವರ್ಷದ ಮುದುಕ 17 ವರ್ಷದ ಅಪ್ರಾಪ್ತೆಯನ್ನು ಅತ್ಯಾಚಾರ ಎಸಗಿದ್ದಾರೆ. ಆರೆಸ್ಸೆಸ್ ನನ ಈ ವ್ಯಕ್ತಿಯ ಕೃತ್ಯದಿಂದ ಆರೆಸ್ಸೆಸ್ ನವರಿಗೆ ನಾಚಿಕೆಯಾಗಬೇಕು ಎಂದರು. 

ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಮಾತನಾಡಿ, ದಲಿತ ಸಮಾಜದ ಬಡ ಅಪ್ರಾಪ್ತೆಯನ್ನು ಮನ ಬಂದಂತೆ ಅತ್ಯಾಚಾರ ನಡೆಸಿ, ಮಗುವಿನ ಜನನಕ್ಕೆ ಕಾರಣವಾದ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಒಂದು ವಾರದ ಗಡುವು ನೀಡಲಾಗುವುದು. ಆರೋಪಿಯನ್ನು ಬಂಧಿಸಿ ಜನರ ಮುಂದೆ ಬಹಿರಂಗಪಡಿಸಬೇಕು. ಇಲ್ಲದಿದ್ದಲ್ಲಿ ಡಿವೈಎಸ್‍ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ನಿರಪರಾದಿ ಸಂತ್ರಸ್ತೆಯ ಅಣ್ಣನನ್ನು ಬಿಡುಗಡೆಮಾಡಬೇಕು. ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. 

ದಲಿತರ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ನಾಯಕಿ ಈಶ್ವರಿ ಪದ್ಮುಂಜ ಮಾತನಾಡಿ, ಆರೆಸ್ಸೆಸ್ ಹಾಗೂ ಬಿಜೆಪಿ ಆಡಳಿತವಿರುವಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಮುಕ್ಕಿ ತಿನ್ನುತ್ತಿದ್ದಾರೆ. ದಲಿತರನ್ನು ಭೋಗದ ವಸ್ತುವಾಗಿ ನೋಡುತ್ತಿದ್ದಾರೆ. ಆರೆಸ್ಸೆಸ್ ಬೆಳೆಯಲು ದಲಿತರೇ ಕಾರಣ. ನಾವೇನು ಹಿಂದುಗಳೆಂದು ಲೆಟರ್‍ಹೆಡ್, ಧರ್ಮದ ಬ್ಯಾನರ್‍ನಲ್ಲಿ ಹುಟ್ಟಿಬಂದಿಲ್ಲ. ನಾವು ರಕ್ತ ನೀಡಿ, ರಕ್ತ ಪಡೆಯುವವರು. ಶರಣ್ ಪಂಪ್‍ವೆಲ್‍ಗೆ ನಾಚಿಕೆ ಆಗಬೇಕು. ನಾವು ತ್ರಿಶೂಲ ನೀಡುವುದೂ ಇಲ್ಲ. ಪಡೆಯುವುದೂ ಇಲ್ಲ. ನಳಿನ್ ಕುಮಾರ್ ರಂತೆ ನಾವು ಜಿಲ್ಲೆಗೆ ಬೆಂಕಿ ಹಾಕುವವರಲ್ಲ. ನಮಗೆ ಬೆಂಕಿ ನಂದಿಸಲು ಗೊತ್ತಿದೆ.  ತಾಯಿಗೆ ಗೌರವ ನೀಡುವ ಬಿಜೆಪಿ, ಆರೆಸ್ಸೆಸ್ನವರ ಈಗ ನಿಮ್ಮ ಹಿಂದುತ್ವ ಎಲ್ಲಿ ಹೋಗಿದೆ. ಹಣ ಪಡೆದು ಸುಳ್ಳು ಕೇಸು ದಾಖಲಿಸುವ ಮೂಲಕ ಸಂತ್ರಸ್ತೆಯ ಅಣ್ಣನನ್ನೇ ಪ್ರಕರಣದಲ್ಲಿ ಬಂಧಿಸುವ ಪೊಲೀಸರಿಗೆ ಅಕ್ಕ, ತಂಗಿಯರಿಲ್ಲವೇ ಎಂದ ಪ್ರಶ್ನಿಸಿದ ಅವರು, ಮಗುವಿನ ಡಿಎನ್‍ಎ ಪರೀಕ್ಷೆ ನಡೆಸುವ ಮೂಲಕ ನಿಜವಾದ ಆರೋಪಿಯನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು.

ದಲಿತ ಸಂಘಟನೆಯ ಸಮನ್ವಯ ಸಮಿತಿ ಸಂಚಾಲಕ ರಘು ಎಕ್ಕಾರ್, ದಲಿತ ಮುಖಂಡರಾದ ಅಭಿಷೇಕ್ ಬೆಳ್ಳಿಪ್ಪಾಡಿ, ಶೇಖರ ಕುಕ್ಕೆಟ್ಟಿ, ನಂದರಾಜ್ ಸಂಕೇಶ, ದಲಿತ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಮತ್ತಿತರರು ಮಾತನಾಡಿ ಪ್ರಕರಣದ ಆರೋಪಿಯನ್ನು ಬಂಧಿಸುವಂತೆ ಮತ್ತು ಸಂತ್ರಸ್ತೆಗೆ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. 

ಪುತ್ತೂರು ನಗರದ ದರ್ಬೆ ಸರ್ಕಲ್‍ನಿಂದ ಗ್ರಾಮಾಂತರ ಠಾಣೆಯ ತನಕ ಪ್ರತಿಭಟನಾಕಾರರು ಕಾಲ್ನಡಿಗೆ ಜಾಥಾ ಮಾಡಿದರು. ಅತ್ಯಾಚಾರ ನಡೆಸಿ ಮಗುವಿನ ಜನನಕ್ಕೆ ಕಾರಣವಾದ ಆರೋಪಿಯನ್ನು  ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕು, ಪ್ರಕರಣವನ್ನು ತಿರುಚಿ ಆರೋಪಿ ಪರ ನಿಂತ ಪೊಲೀಸರನ್ನು ಅಮಾನತು ಮಾಡಬೇಕು. ಪ್ರಕರಣದ ಸಂತ್ರಸ್ತೆಯ ಸಹೋದರನನ್ನು ಬಂಧಿಸಲು ವರದಿ ಸಿದ್ದಪಡಿಸಿದ ಲೇಡಿಗೋಷನ್ ಆಸ್ಪತ್ರೆಯ ವೈದ್ಯಾಧಿಕಾರಿ, ಸಂತ್ರಸ್ಥೆಯ ಹೇಳಿಕೆಯನ್ನು ತನಗಿಷ್ಟ ಬಂದಂತೆ ಸಿದ್ದಪಡಿಸಿ ಆಕೆಯ ಸಹಿಯನ್ನು ಪೋರ್ಜರಿ ಮಾಡಿದ ಮಹಿಳಾ ಪೊಲೀಸ್ ಸಿಬಂದಿ, ಪ್ರಕರಣವನ್ನು ಬುಡಮೇಲು ಮಾಡಿದ ಠಾಣಾಧಿಕಾರಿ, ಸಂತ್ರಸ್ತೆಯ ಮನೆಗೆ ಹೋಗಿ ಬೆದರಿಕೆ ಒಡ್ಡಿದ ಪೊಲೀಸ್ ಸಿಬಂದಿಗಳು, ಘಟನೆಯ ನಿರ್ಲಕ್ಷ್ಯ ವಹಿಸಿದ ಸಮಾಜ ಕಲ್ಯಾಣಾಧಿಕಾರಿಗಳು, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆಯ ಕರ್ತವ್ಯ ಲೋಪದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರು ಆಗ್ರಹಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ಡಿವೈಎಸ್‍ಪಿ ಡಾ. ಗಾನಾ ಪಿ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್‍ಪಿಯವರು, ಘಟನೆಯ ಬಗ್ಗೆ ಈಗಾಗಲೇ ತನಿಖೆಯ ಹಂತದಲ್ಲಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. 

ರಾಷ್ಟ್ರೀಯ ಆದಿವಾಸಿ ಏಕತಾ ಪರಿಷತ್‍ನ ಮುಖಂಡ ಜಯಕುಮಾರ್ ಹಾದಿಗೆ, ದಲಿತ ಸಂಘಟನೆಗಳ ಮುಖಂಡರಾದ ಸುಂದರ ಪಾಟಾಜೆ, ದಯಾನಂದ, ಕೇಶವವ, ನಾಗೇಶ್ ಬಲ್ಮಠ, ದೇವರಾಜ್, ಪ್ರೇಮ್ ಬಲ್ಲಾಳ್‍ಬಾಗ್, ಸುಧಾಕರ್, ಸೇಸಪ್ಪ ನೆಕ್ಕಿಲು, ನಂದರಾಜ್, ಸುಂದರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 
ಲತಾ ಸ್ವಾಗತಿಸಿದರು. ಅರವಿಂದ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News