​ಕೊಂಕಣ ರೈಲ್ವೆಯಲ್ಲಿನ್ನು ಕ್ಯಾಶ್‌ಲೆಸ್ ವ್ಯವಹಾರ

Update: 2021-10-21 13:08 GMT

ಉಡುಪಿ, ಅ.21: ಕೊಂಕಣ ರೈಲ್ವೆಯಲ್ಲಿ ಡಿಜಿಟಲೀಕರಣವನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿ, ಕ್ಯಾಶ್‌ಲೆಸ್ ಸಂಸ್ಥೆ ಎಂದು ಕರೆಸಿಕೊಳ್ಳುವ ನಿಟ್ಟಿನಲ್ಲಿ ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಡೆಟ್ (ಕೆಆರ್‌ಸಿಎಲ್), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.
ಇದರಿಂದ ಇನ್ನು ಮುಂದೆ ಕೊಂಕಣ ರೈಲ್ವೆಯಲ್ಲಿ ರೈಲು ಟಿಕೇಟ್ ಪರೀಕ್ಷಕರು (ಟಿಟಿಇ) ರೈಲಿನಲ್ಲಿ ಟಿಕೇಟ್ ತಪಾಸಣೆ ವೇಳೆ ಪಡೆಯುವ ಹೆಚ್ಚುವರಿ ಅಥವಾ ದಂಡದ ಹಣವನ್ನು ನಗದು ರೂಪದಲ್ಲಿ ಪಡೆಯದೇ ನಗದುರಹಿತವಾಗಿ ಸ್ವೀಕರಿಸಲಿದ್ದಾರೆ.

ಇದರಿಂದ ಇನ್ನು ಮುಂದೆ ಕೊಂಕಣ ರೈಲ್ವೆಯಲ್ಲಿ ರೈಲು ಟಿಕೇಟ್ ಪರೀಕ್ಷಕರು (ಟಿಟಿಇ) ರೈಲಿನಲ್ಲಿ ಟಿಕೇಟ್ ತಪಾಸಣೆ ವೇಳೆ ಪಡೆಯುವ ಹೆಚ್ಚುವರಿ ಅಥವಾ ದಂಡದ ಹಣವನ್ನು ನಗದು ರೂಪದಲ್ಲಿ ಪಡೆಯದೇ ನಗದುರಹಿತವಾಗಿ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಟಿಟಿಇಗಳು ಎಸ್‌ಬಿಐನ ಯೋನೊ ಮರ್ಚಂಟ್ ಆ್ಯಪ್‌ನ್ನು ಹೊಂದಿರುತ್ತಾರೆ. ಆಂಡ್ರಾಯ್ಡಾ ಆಧಾರಿತ ಈ ಆ್ಯಪ್‌ನ್ನು ಟಿಟಿಇಗಳಲ್ಲಿರುವ ಹ್ಯಾಂಡ್‌ಸೆಟ್‌ನಲ್ಲಿ ಅಳವಡಿಸಲಾಗುತ್ತದೆ. ಯೋನೋ ಆ್ಯಪ್‌ನ ಕ್ಯೂಆರ್ ಕೋಡ್ ಮೂಲಕ ಟಿಟಿಇಗಳು ಪ್ರಯಾಣಿಕರಿಂದ ವಸೂಲಿ ಮಾಡುವ ಹೆಚ್ಚುವರಿ ಹಣವನ್ನು ಡಿಜಿಟಲ್ ಮೂಲಕ ಪಡೆಯುವ ವ್ಯವಸ್ಥೆ ಇರುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರು ಕ್ಯೂಆರ್ ಕೋಡ್ ಸ್ಕಾನ್ ಮಾಡಿ ಹಣವನ್ನು ಭೀಮ್, ಪೇಟಿಯಂ, ಗೂಗಲ್ ಪೇ, ಫೋನ್‌ಪೇ ಮುಂತಾದ ಯಾವುದೇ ಡಿಜಿಟಲ್ ಮೋಡ್‌ನಲ್ಲಿ ಪಾವತಿಸಬಹುದಾಗಿದೆ. ಪ್ರಯಾಣಿಕರು ರೈಲಿನಲ್ಲಿ ನೀಡಿದ ಹೆಚ್ಚುವರಿ ಹಣಕ್ಕೆ ಟಿಕೇಟ್‌ನ್ನು ಸಹ ನೀಡಲಾಗುತ್ತದೆ. ಆ್ಯಪ್‌ನ ಬಳಕೆಯಿಂದ ರೈಲುಗಳಲ್ಲಿ ಟಿಟಿಇಗಳು ನಗದು ವ್ಯವಹಾರ ಮಾಡುವುದನ್ನು ತಪ್ಪಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ರತ್ನಗಿರಿಯಲ್ಲಿರುವ ಕೊಂಕಣ ರೈಲು ನಿಲ್ದಾಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಆ್ಯಪ್‌ಗೆ ಚಾಲನೆ ನೀಡಲಾಯಿತು. ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳಾದ ರಾಜೇಶ್ ಬಾದಂಗ್ (ಹಣಕಾಸು ನಿರ್ದೇಶಕ), ಎಲ್.ಕೆ.ಶರ್ಮ (ಮುಖ್ಯ ವ್ಯವಹಾರ ವ್ಯವಸ್ಥಾಪಕ), ಮ್ಯಾಥ್ಯೂ ಫಿಲಿಪ್ (ಸಿಎಒ), ಉಪೇಂದ್ರ ಶೆಡ್ಯೆ(ಪ್ರಾದೇಶಿಕ ರೈಲ್ವೆ ಮ್ಯಾನೇಜರ್) ಹಾಗೂ ಸ್ಟೇಟ್ ಬ್ಯಾಂಕ್‌ನ ಅಧಿಕಾರಿಗಳಾದ ಸಿಓಓ ಸ್ವಪ್ನ ಘೋಷ್, ಉಪಾಧ್ಯಕ್ಷ ಅಮಿತ್ ರಾಜ್, ಎಜಿಎಂ ಸತೀಶ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News