ಉಡುಪಿ: ಅನೈತಿಕ ಪೊಲೀಸ್ ಗಿರಿ, ಮುಖ್ಯಮಂತ್ರಿ ಹೇಳಿಕೆ ಖಂಡಿಸಿ ಪ್ರತಿಭಟನೆ

Update: 2021-10-21 15:11 GMT

ಉಡುಪಿ, ಅ.21: ಅನೈತಿಕ ಪೊಲೀಸ್ ಗಿರಿ ಮತ್ತು ಮತೀಯ ಗೂಂಡಾಗಿರಿ ಸಮರ್ಥಿಸುವ ಮುಖ್ಯಮಂತ್ರಿಯ ಹೇಳಿಕೆಯನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕರೆಯಂತೆ ಸಹಬಾಳ್ವೆ ಉಡುಪಿ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಮಾತನಾಡಿ, ರಾಜ್ಯದ ವಿವಿಧೆಡೆಗಳಲ್ಲಿ ದಿನನಿತ್ಯ ಎಂಬಂತೆ ಪುಂಡರು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅನ್ಯ ಧರ್ಮದವರೊಂದಿಗೆ ಪಿಕ್‌ನಿಕ್ ಹೋಗುವುದು, ಜ್ಯೂಸ್ ಕುಡಿಯುವುದು, ಪ್ರಯಾಣ ಮಾಡುವುದು ಅಪರಾಧ ಎಂಬಂತೆ ಅವರ ಹಕ್ಕುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಹೀಗೆ ತಿರುಗಾಡುವವರನ್ನು ತಡೆಯುವ ಅಥವಾ ಹೊಡೆಯುವ ಅಧಿಕಾರ ಯಾರಿಗೂ ಇಲ್ಲ ಎಂದು ತಿಳಿಸಿದರು.

ಈ ಕೃತ್ಯ ಎಸಗುವವರನ್ನು ಜೈಲಿಗೆ ಹಾಕುವ ಬದಲು ಮುಖ್ಯಮಂತ್ರಿ ಲಘುವಾಗಿ ಹೇಳಿಕೆ ನೀಡಿ ಇನ್ನಷ್ಟು ಅವಕಾಶಗಳನ್ನು ಕಲ್ಪಿಸುತ್ತಿದ್ದಾರೆ. ಇದರ ಪರಿಣಾಮ ಸಂಘಪರಿವಾರದ ಕಾರ್ಯಕರ್ತರು ಬೆಳಗಾವಿಯ ಬೀದಿಯಲ್ಲಿ ತಲವಾರು ಹಿಡಿದು ಕುಣಿಯುವಂತಾಗಿದೆ. ಈ ಮೂಲಕ ಭಾರತ ಇಂದು ಶಿಲಾಯುಗದತ್ತ ಸಾಗುತ್ತಿದೆ. ಇವರು ಹೇಳಿದ್ದೆ ಕಾನೂನು, ಮಾಡಿದ್ದೆ ಕಾರುಬಾರು ಆಗಿದೆ. ಆ ಮೂಲಕ ಗೂಂಡಾ ಹಾಗೂ ಜಂಗಲ್ ರಾಜ್ಯ ಆಗುತ್ತಿದೆ ಎಂದು ಅವರು ಆರೋಪಿಸಿದರು.

ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಜನರ ಬದುಕು ದುಸ್ತರ ಮಾಡಿರುವ ಬೆಲೆ ಏರಿಕೆ ಬಗ್ಗೆ ಮಾತನಾಡದ ಸಂಘ ಪರಿವಾರ ಕೇವಲ ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗಿಸಿಕೊಂಡಿದೆ. ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಮುಖ್ಯಮಂತ್ರಿ, ತಮ್ಮ ಹೇಳಿಕೆಯ ಮೂಲಕ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ದೂರಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಮಾತನಾಡಿ, ಅನೈತಿಕ ಪೊಲೀಸ್‌ಗಿರಿ ಮೂಲಕ ಕಾನೂನು ಕೈಗೆತ್ತಿಕೊಳ್ಳುವುದು ಸಂವಿಧಾನ ಬಾಹಿರವಾಗಿದೆ. ಈ ದೇಶದಲ್ಲಿ ಎಲ್ಲ ಧರ್ಮದವರಿಗೂ ಭಾಳು ಅವಕಾಶ ಇದೆ. ಆದರೆ ಸಂಘಪರಿವಾರದವು ಧರ್ಮ ಬಾಹಿರ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇಂತಹ ಕೃತ್ಯಗಳ ಮೂಲಕ ಇಂದು ಭಾರತ ಸ್ಥಾನಮಾನಕ್ಕೆ ಸಾಕಷ್ಟು ಹೊಡೆದ ಬೀಳುತ್ತಿದೆ ಎಂದು ತಿಳಿಸಿದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹಿರಿಯ ಚಿಂತಕ ಶಿವಸುಂದರ್, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಅಬ್ದುಲ್ ಅಝೀಝ್ ಉದ್ಯಾವರ, ಅನ್ವರ್ ಅಲಿ ಕಾಪು, ರಿಯಾಝ್ ಅಹ್ಮದ್, ಎಂ.ಪಿ.ಮೊದಿನಬ್ಬ, ಯಾಸೀನ್ ಮಲ್ಪೆ, ಸಂವರ್ತ್ ಸಾಹಿಲ್, ಹುಸೇನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಹಕ್ಕೋತ್ತಾಯಗಳು
ಅನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿ ಸಿಎಂ ನೀಡಿರುವ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು. ರಾಜ್ಯ ಸರಕಾರ ಸಂವಿಧಾನವನ್ನು ಎತ್ತಿಹಿಡಿದು, ಧರ್ಮ, ಜಾತಿ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಮತ್ತು ಆರೋಪಿಗಳಿಗೆ ಶಿಕ್ಷಿಸಲು ಕ್ರಮ ಕೈಗೊಳ್ಳಬೇಕು.
ತೆಹಸೀನ್ ಪೂನವಲ್ಲಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕಣದಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಗುಂಪು ಹಿಂಸಾಚಾರವನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ರಚಿಸಬೇಕು ಮತ್ತು ಸಂತಸ್ತರಿಗೆ ಪರಿಹಾರವನ್ನು ನೀಡಬೇಕು. ಶಕ್ತಿ ವಾಹಿನಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು.
ಸರ್ವೋಚ್ಛ ನ್ಯಾಯಾಲಯವು ಅಂತರ್ಜಾತಿ ಮತ್ತು ಅಂತರ್ಧರ್ಮಿ ವಿವಾಹ ಗಳನ್ನು ರಕ್ಷಿಸಲು ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು. ಅಂತಹ ವಿವಾಹಿತ ವ್ಯಕ್ತಿಗಳ ವಿರುದ್ಧ ನಡೆಯುವ ಹಿಂಸೆ, ಮರ್ಯಾದಾ ಹತ್ಯೆಗಳು ಮತ್ತು ಅನೈತಿಕ ಪೊಲೀಸ್‌ಗಿರಿ ವಿರುದ್ಧ ತೆಗೆದುಕೊಳ್ಳುವ ಕಾನೂನು ಕ್ರಮಗಳನ್ನು ಪ್ರಚಾರ ಮಾಡಬೇಕು ಎಂದು ಪ್ರತಿಭಟನಕಾರರು ಹಕ್ಕೋತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News