ಮಂಗಳೂರು: ಮತಾಂತರ ನಿಷೇಧದ ಆಧ್ಯಾದೇಶ ಹೊರಡಿಸಲು ಆಗ್ರಹ

Update: 2021-10-21 16:19 GMT

ಮಂಗಳೂರು, ಅ.21: ಹಿಂದೂಗಳ ಮತಾಂತರ ಹೆಚ್ಚುತ್ತಿದ್ದು, ಈಗಾಗಲೇ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಹಾಗಾಗಿ ರಾಜ್ಯ ಸರಕಾರ ಕೂಡಲೆ ಮತಾಂತರ ನಿಷೇಧ ಕಾನೂನು ಜಾರಿಯಾಗಲು ಆಧ್ಯಾದೇಶ ಹೊರಡಿಸಬೇಕು ಎಂದು ದ.ಕ. ಜಿಲ್ಲಾ ವಿಶ್ವ ಹಿಂದೂ ಪರಿಷತ್ ಹಾಗೂ ವಿವಿಧ ಮಠಾಧೀಶರು ಆಗ್ರಹಿಸಿದ್ದಾರೆ. ನಗರದಲ್ಲಿ ಗುರುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ವಿಶ್ವ ಹಿಂದೂ ಪರಿಷತ್ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಠಾಧೀಶರು, ಸಾಧು ಸಂತರೊಂದಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಒತ್ತಾಯ ಮಾಡಲು ನಿರ್ಧರಿಸಿದ್ದು, ದ.ಕ.ದಲ್ಲೂ ಸ್ವಾಮೀಜಿಗಳೊಂದಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಹಿಂದೂಗಳ ಬಡತನ, ಅನಾರೋಗ್ಯವನ್ನು ದುರುಪಯೋಗಪಡಿಸಿ, ಆಮಿಷವೊಡ್ಡಿ ಮತಾಂತರ ಮಾಡಿ ಸ್ವಇಚ್ಛೆಯ ಮತಾಂತರ ಎಂದು ಬಿಂಬಿಸಲಾಗುತ್ತಿದೆ. ಕುಟುಂಬದಲ್ಲಿ ಒಬ್ಬರು ಮತಾಂತರಗೊಂಡರೆ ಆ ಕುಟುಂಬದ ಇತರ ಸದಸ್ಯರ ಧಾರ್ಮಿಕ ಹಕ್ಕಿಗೆ ಧಕ್ಕೆಯಾಗಿ ಮಾನಸಿಕ ಆಘಾತಕ್ಕೆ ಒಳಗಾಗುತ್ತಿರುವುದು ಕಂಡುಬರುತ್ತಿದೆ. ಸಾಮಾಜಿಕ ಸುವ್ಯವಸ್ಥೆ, ಜನರ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ರಬಲವಾದ ಮತಾಂತರ ಮಸೂದೆ ಜಾರಿಗೊಳಿಸುವ ಅಗತ್ಯವಿದೆ ಎಂದು ಪುರಾಣಿಕ್ ಒತ್ತಾಯಿಸಿದರು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮತಾಂತರ ಕಾಯಿಲೆಯಂತೆ ಹರಡುತ್ತಿದೆ. ಅನಾರೋಗ್ಯ, ಉದ್ಯೋಗ ಹೆಸರಿನಲ್ಲಿ ಕೂಡ ಮತಾಂತರ ನಡೆಯುತ್ತಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕುವ ಪ್ರಬಲ ಕಾನೂನು ಜಾರಿಯಾಗಬೇಕು ಎಂದು ಹೇಳಿದರು.

ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಕೇಸರಿ ವಿರುದ್ಧ ಹೇಳಿಕೆ ನೀಡುವ ಮೂಲಕ ಮಾಜಿ ಎಂಎಲ್ಸಿ ಐವನ್ ಡಿಸೋಜ ಅವರು ತಮ್ಮ ಪಕ್ಷದೊಂದಿಗೇ ಮುಳುಗುವ ಸನ್ನಿವೇಶ ಇದೆ. ಅವರು ಕೇಸರಿ ಹೆಣ್ಣನ್ನೇ ಮದುವೆಯಾಗಿದ್ದನ್ನು ಜ್ಞಾಪಿಸಿಕೊಳ್ಳಲಿ. ಮಾತನಾಡುವಾಗ ಜಾಗ್ರತೆಯಿಂದ ಮಾತನಾಡುವುದು ಒಳಿತು ಎಂದರು.

ಓಂ ಶ್ರೀ ಮಠದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿದರು. ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News