ಪೊಲೀಸರ ತ್ಯಾಗ, ಬಲಿದಾನ ಅವಿಸ್ಮರಣೀಯ: ಉಡುಪಿ ಡಿಸಿ ಕೂರ್ಮಾರಾವ್

Update: 2021-10-21 16:47 GMT

ಉಡುಪಿ, ಅ.21: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಜನತೆ ಶಾಂತಿ ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಪೊಲೀಸರು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವುದೇ ಕಾರಣ. ಪೊಲೀಸರು ಮಾಡುವ ತ್ಯಾಗ ಹಾಗೂ ಬಲಿದಾನ ಸದಾ ಅವಿಸ್ಮರಣೀಯ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಚಂದು ಮೈದಾನದಲ್ಲಿ ಗುರುವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಗೌರವ ವಂದನೆ ಲ್ಲಿಸಿ ಅವರು ಮಾತನಾಡುತಿದ್ದರು.

ಯಾವುದೇ ಅಸಾಧಾರಣಾ ಸನ್ನಿವೇಶದಲ್ಲೂ ವಿಶೇಷ ಸೇವೆ ಸಲ್ಲಿಸುವ ಪೊಲೀಸರು, ತುರ್ತು ಕ್ಲಿಷ್ಟಕರ ಪರಿಸ್ಥಿತಿ, ಪ್ರಾಕೃತಿಕ ವಿಕೋಪದಂತಹ ಪರಿಸ್ಥಿತಿ ಯಲ್ಲೂ ಎದೆಗುಂದದೇ ಕಾರ್ಯ ನಿರ್ವಹಿಸುತ್ತಾರೆ. ಜಿಲ್ಲೆಯಲ್ಲಿ ಪೊಲೀಸರು ಅತ್ಯಂತ ಸುವ್ಯವಸ್ಥಿತವಾಗಿ ಯೋಜನಾ ಬದ್ದವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಜಿಲ್ಲಾಡಳಿತದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಪೊಲೀಸ್ ಹುತಾತ್ಮರ ದಿನಾಚರಣೆಯ ಮಹತ್ವ ಹಾಗೂ 1-9-2020 ರಿಂದ 31-8-2021 ರ ವರೆಗೆ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾದ ಕರ್ನಾಟಕದ 16 ಮಂದಿ ಸೇೀರಿದಂತೆ ದೇಶದ ಒಟ್ಟು 377 ಪೊಲೀಸರ ನಾಮಸ್ಮಣೆ ಮಾಡಿದರು.

ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು. ಪ್ರೋಬೆಷನರ್ ಆರ್‌ಎಸ್‌ಐ ಪುನೀತ್ ಕುಮಾರ್ ಪರೇಡ್ ನೇತೃತ್ವ ವಹಿಸಿದ್ದರು. ಕರಾವಳಿ ಕಾವಲು ಪಡೆಯ ಎಸ್‌ಐ ಬಿ.ಮನಮೋಹನ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News