ಗೌರವಯುತ ಬಿಡುಗಡೆಗೆ ಹೈಕೋರ್ಟ್‌ಗೆ ಮೇಲ್ಮನವಿ: ದಿನೇಶ್ ಹೆಗ್ಡೆ ಉಳೆಪಾಡಿ

Update: 2021-10-21 17:48 GMT

ಮಂಗಳೂರು, ಅ.21: ವಿಠಲ್ ಮಲೆಕುಡಿಯ ಮತ್ತು ಲಿಂಗಣ್ಣ ಮಲೆಕುಡಿಯ ಬಂಧನದ ಹಿಂದೆ ರಾಜಕೀಯ ಹಸ್ತಕ್ಷೇಪ ಇರುವುದು ಸ್ಪಷ್ಟ. ಖುಲಾಸೆಯಾದ ವಿಠಲ ಮಲೆಕುಡಿಯ ಅವರನ್ನು ಗೌರವಯುತ ಬಿಡುಗಡೆಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಿಠಲ್ ಮಲೆಕುಡಿಯ ಪರ ವಕಾಲತು ವಹಿಸಿದ ನ್ಯಾಯವಾದಿ ದಿನೇಶ್ ಉಳೆಪಾಡಿ ತಿಳಿಸಿದ್ದಾರೆ.

ವಿಠಲ ಮಲೆಕುಡಿಯ ಬಂಧನವಾದ ಒಂದು ವಾರದ ಬಳಿಕ ಚಿಕ್ಕಮಗಳೂರಿನಲ್ಲಿ ಉಪಚುನಾವಣೆ ನಡೆದಿತ್ತು. ನಕ್ಸಲ್ ನಂಟು ಆರೋಪಕ್ಕೆ ಪೂರಕವಾದ ಸಾಕ್ಷವಿಲ್ಲದೆ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಲಯ ಸಮಗ್ರ ವಿಚಾರಣೆ ನಡೆಸಿದ ಬಳಿಕ ಪ್ರಕರಣಕ್ಕೆ ಪೂರಕವಾದ ಸಾಕ್ಷವಿಲ್ಲದ ಕಾರಣ ಆರೋಪಿಗಳನ್ನು ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. ಆದರೆ ಇದು ವಿಶೇಷ ಪ್ರಕರಣವಾಗಿದ್ದು, ಆಡಳಿತ ವ್ಯವಸ್ಥೆ ವಿನಾಕಾರಣ ವಿಠಲ ಮಲೆಕುಡಿಯ ಅವರನ್ನು ಬಂಧಿಸಿದ ಕಾರಣ ಅವರನ್ನು ಗೌರವಯುತವಾಗಿ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್‌ಗೆ ಮೇಲ್ಮನವಿ ಮಾಡಲಾಗುವುದು ಎಂದು ಉಳೆಪಾಡಿ ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಮನವಿ ಮಾಡಿದರೂ ತೀರ್ಪುವಿನಲ್ಲಿ ನಿರ್ದೋಷಿ ಎಂದು ಮಾತ್ರ ಹೇಳಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ, ಹಕ್ಕಿಗಾಗಿ ಸರಕಾರದ ವಿರುದ್ಧ ಹೋರಾಟದ ಹಾದಿ ತುಳಿದ ವಿಠಲ ಮಲೆಕುಡಿಯ ಅವರನ್ನು ಬಂಧಿಸಲಾಗಿದೆ. ಇದು ಹೋರಾಟವನ್ನು ದಮನಿಸುವ ಯತ್ನವಾಗಿತ್ತು. ಆದರೆ ನ್ಯಾಯಾಲಯ ತೀರ್ಪಿನ ಮೂಲಕ 10 ವರ್ಷಗಳ ಹೋರಾಟ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕ ಗೆಲುವು ಎನ್ನಬಹುದು ಎಂದು ಉಳೆಪಾಡಿ ಹರ್ಷ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News