ಭಟ್ಕಳ: ಖ್ಯಾತ ಕ್ರೀಡಾಪಟು ಹಮ್ಮಾದ್ ಸಿದ್ದೀಖಾ ನಿಧನ

Update: 2021-10-21 17:53 GMT

ಭಟ್ಕಳ, ಅ.21: ಇಲ್ಲಿನ ಕೆ.ಎಚ್.ಬಿ. ಕಾಲನಿಯ ನಿವಾಸಿ ಲಯನ್ಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟು ಹಮ್ಮಾದ್ ಸಿದ್ದೀಖಾ (34) ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರು ಕ್ರಿಕೆಟ್ ಮತ್ತು ಕಬಡ್ಡಿಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಸೌದಿ ಅರೇಬಿಯಾದ ಜಿದ್ದಾದಲ್ಲಿ ತಮ್ಮದೇ ಸ್ವಂತ ವ್ಯವಹಾರವನ್ನು ನೋಡಿಕೊಂಡಿದ್ದ ಇವರು ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಯು ಭಟ್ಕಳದಲ್ಲಿ ಗುರುವಾರ ನೆರವೇರಿತು.

ಹಮ್ಮಾದ್ ಸಿದ್ದೀಖಾ ಓರ್ವ ಉತ್ತಮ ಕ್ರೀಡಾಪಟು, ಅತ್ಯಂತ ಸಭ್ಯ ವ್ಯಕ್ತಿ, ಸಾಮಾಜಿಕ ಮತ್ತು ಸಹಾಯ ಮಾಡುವ ಸ್ವಭಾವ ಮತ್ತು ನಮ್ಮ ಸಮುದಾಯದ ಆಸ್ತಿ. ನಿಜವಾಗಿಯೂ ಜಿದ್ದಾದಲ್ಲಿರುವ ಭಟ್ಕಳ ಸಮುದಾಯ ತನ್ನ ದೊಡ್ಡ ಆಸ್ತಿಯನ್ನು ಕಳೆದುಕೊಂಡಿದೆ. ಭಟ್ಕಳ ಮುಸ್ಲಿಮ್ ಜಮಾಅತ್ ಜಿದ್ದಾ ಸಮಿತಿ ಅವರ ನಿಧನಕ್ಕೆ ತೀವ್ರಸಂತಾಪ ವ್ಯಕ್ತಪಡಿಸುತ್ತಿದ್ದು, ಅವರ ಕುಟುಂಬದೊಂದಿಗೆ ದುಃಖದಲ್ಲಿ ಭಾಗಿಯಾಗಿದ್ದೇವೆ ಎಂದು ತಿಳಿಸಿದೆ.

ಈ ಕುರಿತಂತೆ ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್‌ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಭಟ್ಕಳವು ಓರ್ವ ಉತ್ತಮ ಕ್ರೀಡಾಪಟುವನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಹಮ್ಮಾದ್ ಸಿದ್ದೀಖಾರನ್ನು ತರಬೇತುಗೊಳಿಸಿದ್ದ ಅವರ ಕೋಚ್ ಇಸ್ಲಾಮಿಯಾ ಆಂಗ್ಲೋ-ಉರ್ದು ಪ್ರೌಢಶಾಲೆಯ ದೈಹಿಕ ಶಿಕ್ಷಕ ರಾಜಾಸಾಬ್, ವಿದ್ಯಾರ್ಥಿ ದೆಸೆಯಿಂದಲೂ ಉತ್ತಮ ಗುಣನಡೆತೆಗಳನ್ನು ಹೊಂದಿರುವ ಹಮ್ಮಾದ್ ಕ್ರೀಡಾಕ್ಷೇತ್ರದಲ್ಲಿ ಉನ್ನತಮಟ್ಟಕ್ಕೇರಿದರೂ ಯಾವುದೇ ರೀತಿಯ ಅಹಂ ತೋರದೆ ಓರ್ವ ಸಭ್ಯ ವ್ಯಕ್ತಿಯಾಗಿದ್ದರು. ಇವರ ನಿಧನದಿಂದ ಭಟ್ಕಳವು ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News