"ಅಂಬಾನಿ ಮತ್ತು ಆರೆಸ್ಸೆಸ್‌ ಪದಾಧಿಕಾರಿಯ ʼಡೀಲ್‌ʼ ಗಳನ್ನು ಸರಿಪಡಿಸಲು ನನಗೆ 300 ಕೋಟಿ ರೂ. ಆಮಿಷವೊಡ್ಡಲಾಗಿತ್ತು"

Update: 2021-10-22 17:18 GMT

ಹೊಸದಿಲ್ಲಿ,ಅ.22: ತಾನು ಜಮ್ಮು-ಕಾಶ್ಮೀರದ ರಾಜ್ಯಪಾಲನಾಗಿದ್ದಾಗ ಅಂಬಾನಿ ಮತ್ತು ಆರೆಸ್ಸೆಸ್ ವ್ಯಕ್ತಿಯ ವ್ಯವಹಾರ ಒಪ್ಪಂದಗಳಿಗೆ ಅಂಗೀಕಾರ ನೀಡಿದರೆ 300 ಕೋ.ರೂ.ಗಳ ಲಂಚದ ಆಮಿಷವನ್ನು ತನಗೊಡ್ಡಲಾಗಿತ್ತು ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಹೇಳಿದ್ದಾರೆ. ಮಲಿಕ್ ಅವರನ್ನು 2018,ಆ.21ರಂದು ಜಮ್ಮು-ಕಾಶ್ಮೀರದ ರಾಜ್ಯಪಾಲರನ್ನಾಗಿ ನೇಮಕಗೊಳಿಸಲಾಗಿತ್ತು. ಅಕ್ಟೋಬರ್ 2019ರಲ್ಲಿ ಅವರನ್ನು ಗೋವಾಕ್ಕೆ ವರ್ಗಾಯಿಸಲಾಗಿತ್ತು.

ತಾನು ಜಮ್ಮು-ಕಾಶ್ಮೀರದ ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ್ದ ಬೆನ್ನಲ್ಲೇ ಎರಡು ಕಡತಗಳು ತನ್ನ ಬಳಿ ಬಂದಿದ್ದವು. ಒಂದು ಕಡತ ಅಂಬಾನಿಗೆ ಸೇರಿದ್ದರೆ ಇನ್ನೊಂದು ಪ್ರಮುಖ ಆರೆಸ್ಸೆಸ್ ಮುಖಂಡನಿಗೆ ಸೇರಿತ್ತು. ಇವುಗಳಲ್ಲಿ ಹಗರಣವಿದೆ ಎಂದು ತನಗೆ ತಿಳಿಸಲಾಗಿತ್ತು. ತಾನು ಅವೆರಡೂ ವ್ಯವಹಾರಗಳನ್ನು ರದ್ದುಗೊಳಿಸಿದ್ದೆ. ಈ ಕಡತಗಳನ್ನು ಅಂಗೀಕರಿಸಿದರೆ ನೀವು ತಲಾ 150 ಕೋ.ರೂ.ಗಳನ್ನು ಪಡೆಯಬಹುದು ಎಂದು ಕಾರ್ಯದರ್ಶಿಗಳು ತನಗೆ ತಿಳಿಸಿದ್ದರು ಎಂದು ಮಲಿಕ್ ಹೇಳಿರುವ ವೀಡಿಯೊ ಗುರುವಾರ ಟ್ವಿಟರ್ನಲ್ಲಿ ವೈರಲ್ ಆಗಿದೆ.

‘ಆದರೆ ನಾನು ಐದು ಕುರ್ತಾ-ಪೈಜಾಮಾಗಳೊಂದಿಗೆ ಇಲ್ಲಿಗೆ ಬಂದಿದ್ದೇನೆ ಮತ್ತು ಇಲ್ಲಿಂದ ತೆರಳುವಾಗ ಅವುಗಳನ್ನು ಮಾತ್ರ ಒಯ್ಯುತ್ತೇನೆ ’ಎಂದು ಅವರಿಗೆ ತಿಳಿಸಿದ್ದೆ ಎಂದೂ ಮಲಿಕ್ ಹೇಳಿದ್ದಾರೆ. ರವಿವಾರ ರಾಜಸ್ಥಾನದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭ ಮಲಿಕ್ ಈ ಮಾತುಗಳನ್ನಾಡಿದ್ದರು ಎನ್ನಲಾಗಿದೆ.

ಮಲಿಕ್ ಪ್ರಸ್ತಾಪಿಸಿದ್ದ ಕಡತಗಳ ಪೈಕಿ ಒಂದು ಜಮ್ಮು -ಕಾಶ್ಮೀರದಲ್ಲಿ ಸರಕಾರಿ ನೌಕರರು,ಪತ್ರಕರ್ತರು ಮತ್ತು ಪಿಂಚಣಿದಾರರಿಗೆ ಆರೋಗ್ಯ ವಿಮೆ ಪಾಲಿಸಿಗೆ ಸಂಬಂಧಿಸಿತ್ತು. ಇದಕ್ಕಾಗಿ ಆಡಳಿತವು ಅನಿಲ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹದ ಅಂಗವಾದ ರಿಲಯನ್ಸ್ ಜನರಲ್ ಇನ್ಶೂರನ್ಸ್ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿತ್ತು. ಈ ಒಪ್ಪಂದವನ್ನು ಮಲಿಕ್ ರದ್ದುಗೊಳಿಸಿದ್ದರು.

ತಾನು ಯಾವ ಹೆದರಿಕೆಯೂ ಇಲ್ಲದೆ ರೈತರ ಪರವಾಗಿ ಮಾತನಾಡಿದ್ದೇನೆ ಎಂದು ಇದೇ ವೀಡಿಯೊದಲ್ಲಿ ಹೇಳಿಕೊಂಡಿರುವ ಮಲಿಕ್,ತಾನು ಕಾಶ್ಮೀರದಲ್ಲಿ ಏನನ್ನಾದರೂ ಮಾಡಿದ್ದರೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ತನ್ನ ಮನೆಗೆ ತಲುಪುತ್ತಿದ್ದವು. ಈ ಸಂಸ್ಥೆಗಳು ತನ್ನ ಶೋಧ ಕಾರ್ಯಾಚರಣೆ ನಡೆಸಬಹುದು,ಅದರೆ ತನ್ನ ಬಳಿ ಏನೂ ಸಿಗುವುದಿಲ್ಲ ಎಂದು ವಿಶ್ವಾಸದಿಂದ ಹೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ಈ ವಿಷಯವನ್ನು ತಂದಿದ್ದೆ. ‘ನಾನು ಹುದ್ದೆಯನ್ನು ತೊರೆಯಲು ಸಿದ್ಧನಿದ್ದೇನೆ,ಆದರೆ ಕಡತಗಳಿಗೆ ಅಂಗೀಕಾರ ನೀಡುವುದಿಲ್ಲ ’ಎಂದು ಅವರಿಗೆ ನೇರವಾಗಿ ತಿಳಿಸಿದ್ದೆ. ಭ್ರಷ್ಟಾಚಾರದ ಬಗ್ಗೆ ಮೃದು ನಿಲುವು ತಳೆಯುವ ಅಗತ್ಯವಿಲ್ಲ ಎಂದು ಪ್ರಧಾನಿ ತನಗೆ ತಿಳಿಸಿದ್ದರು ಎಂದು ಹೇಳಿದ್ದಾರೆ.

ಮಲಿಕ್ ಬಯಲುಗೊಳಿಸಿರುವ ವಿಷಯವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಭ್ರಷ್ಟ ಮಾಫಿಯಾದ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಆಘಾತಕಾರಿಯಾಗಿದೆ. ತನ್ನನ್ನು ಜಮ್ಮು-ಕಾಶ್ಮೀರ ರಾಜ್ಯಪಾಲ ಹುದ್ದೆಯಿಂದ ಬಿಡುಗಡೆಗೊಳಿಸಿದ ಬೆನ್ನಲ್ಲೇ ಮಲಿಕ್ ಇದನ್ನು ಬಹಿರಂಗಗೊಳಿಸಬೇಕಿತ್ತು ಎಂದು ಜಮ್ಮು-ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿಯ ಅಧ್ಯಕ್ಷ ಹರ್ಷದೇವ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News