ಉಮರ್‌ ಖಾಲಿದ್‌ ತಂದೆ ಸಮಾಜವಾದಿ ಪಕ್ಷದ ಜೊತೆ ಸೇರಿ ಸಂಚು ಹೂಡುತ್ತಿದ್ದಾರೆ: ಆದಿತ್ಯನಾಥ್‌ ಆರೋಪ

Update: 2021-10-22 08:53 GMT

ಲಕ್ನೋ : "ವಿಪಕ್ಷಗಳು ಯಾವುದೇ ಹಂತಕ್ಕೂ ಹೋಗಬಹುದು. ಇತ್ತೀಚೆಗೆ ಒಂದು ಪಕ್ಷವನ್ನು ಭೇಟಿಯಾಗಲು ಯಾರು ಬಂದಿದ್ದರೆಂಬುದನ್ನು ನೀವು ನೋಡಿರಬಹುದು, ಭಾರತ್ ತೇರೇ ಟುಕ್ಡೇ ಹೋಂಗೆ ಎಂದು ಹೇಳುವ ಉಮರ್ ಖಾಲಿದ್‍ನ ತಂದೆ. ಆ ವ್ಯಕ್ತಿ ಸಮಾಜವಾದಿ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲು ಬಂದು ತಾನು ಪಕ್ಷಕ್ಕಾಗಿ ಒಂದು ಸಂಚು ರೂಪಿಸುತ್ತಿರುವುದಾಗಿ ಹೇಳಿ ಚಿಂತಿಸದಂತೆ ಹೇಳುತ್ತಾರೆ. ಇಂತಹ ಜನರು ಬಂದರೆ(ಅಧಿಕಾರಕ್ಕೆ) ಏನನ್ನು ನಿರೀಕ್ಷಿಸುತ್ತೀರಿ?" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ  ಆದಿತ್ಯನಾಥ್ ಅವರು ಬಿಜೆಪಿ ಪ್ರತಿನಿಧಿ ಸಮ್ಮೇಳನವನ್ನುದ್ದೇಶಿಸಿ ಗುರುವಾರ ಮಾತನಾಡುತ್ತಾ ಹೇಳಿದ್ದಾರೆ.

 ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಅವರ ಯಾದವ್ ಪಕ್ಷಕ್ಕಾಗಿ 'ಸಂಚು' ರೂಪಿಸುವುದಾಗಿ ಉಮರ್ ಖಾಲಿದ್ ತಂದೆ ಹೇಳಿದ್ದಾರೆಂದು ಆರೋಪಿಸಿರುವ ಯೋಗಿ ಆದಿತ್ಯನಾಥ್ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಶಾನ್ಯ ದಿಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆಂಬ ಆರೋಪ ಹೊತ್ತು ಯುಎಪಿಎ ಅಡಿಯಲ್ಲಿ ಉಮರ್ ಖಾಲಿದ್ ಬಂಧನದಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.

ಆದಿತ್ಯನಾಥ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧುರಿ, "ಮುಂಬರುವ ಚುನಾವಣೆ ಸಂದರ್ಭ ಮತೀಯ ಆಧಾರದಲ್ಲಿ ಧ್ರುವೀಕರಣ ನಡೆಸಲು ಇಂತಹ ವಿಚಾರ ಎತ್ತುತ್ತಿದ್ದಾರೆ" ಎಂದು ಆರೋಪಿಸಿದ್ದಾರಲ್ಲದೆ ಉಮರ್ ಖಾಲಿದ್ ಅವರ ತಂದೆ ಹಾಗೂ ಅಖಿಲೇಶ್ ಯಾದವ್ ನಡುವೆ ನಡೆದ ಸಭೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದೂ ಅವರು ಹೇಳಿದರು. "ಸಮಾಜವಾದಿ ಪಕ್ಷ ಒಂದು ಸಮಾಜವಾದಿ ಹಾಗೂ ಪ್ರಜಾಪ್ರಭುತ್ವವಾದಿ ಪಕ್ಷವಾಗಿದೆ. ಯಾವುದೇ ವ್ಯಕ್ತಿ ಯಾ ಸಂಘಟನೆ ಪಕ್ಷವನ್ನು ಭೇಟಿಯಾಗಿ ಬೆಂಬಲಿಸಲು ಮುಕ್ತವಾಗಿದೆ" ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News