ಉದ್ಯಾನವನಕ್ಕೆ ಫಾ.ಸ್ಟ್ಯಾನ್ ಸ್ವಾಮಿ ಹೆಸರು: ಬೆಂಬಲ ವ್ಯಕ್ತಪಡಿಸಿದ ಬಿ.ಕೆ.ಹರಿಪ್ರಸಾದ್

Update: 2021-10-22 09:33 GMT

ಮಂಗಳೂರು, ಅ.22: ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ನಗರದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳಿಗೆ ಇಂದು ಭೇಟಿ ನೀಡಿ ಸಂಸ್ಥೆಯ ರೆಕ್ಟರ್ ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಎಸ್.ಜೆ. ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮಂಗಳೂರಿನ ಕೋಟೆಕಾರು ಬೀರಿಯಲ್ಲಿರುವ ಸಂತ ಅಲೋಶಿಯಸ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆ್ಯಂಡ್ ಐಟಿ ಇದರ ಉದ್ಯಾನವನಕ್ಕೆ ಆದಿವಾಸಿ ಹಕ್ಕುಗಳ ಹೋರಾಟಗಾರ ದಿವಂಗತ ಫಾ.ಸ್ಟ್ಯಾನ್ ಸ್ವಾಮಿ ಹೆಸರಿಡುವ ಪ್ರಸ್ತಾಪಕ್ಕೆ ಸಂಘ ಪರಿವಾರದ ಸಂಘಟನೆಗಳು ಆಕ್ಷೇಪಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಗೆ ಭೇಟಿ ನೀಡಿದ ಬಿ.ಕೆ.ಹರಿಪ್ರಸಾದ್ ಅವರು ಸಂಸ್ಥೆಯ ರೆಕ್ಟರ್ ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಜೊತೆ ಮಾತುಕತೆ ನಡೆಸಿದರು.

ಉದ್ಯಾನವನಕ್ಕೆ ಫಾ.ಸ್ಟ್ಯಾನ್ ಸ್ವಾಮಿ ಹೆಸರಿಡುವ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಒತ್ತಾಯಿಸಿದ ಹರಿಪ್ರಸಾದ್ ಅವರು, ಅನೈತಿಕ ಪೊಲೀಸ್ ಗಿರಿಗೆ ಭಯಬೀಳಬೇಡಿ, ನಾವು ನಿಮ್ಮ ಜೊತೆಗಿದ್ದೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಕಾರ್ಪೊರೇಟರ್ ಗಳಾದ ಶಶಿಧರ ಹೆಗ್ಡೆ, ಅಬ್ದುಲ್ ರವೂಫ್ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರಿನ ಕೋಟೆಕಾರು ಬೀರಿಯಲ್ಲಿರುವ ಸಂತ ಅಲೋಶಿಯಸ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆ್ಯಂಡ್ ಐಟಿ ಕ್ಯಾಂಪಸ್‌ನ ಉದ್ಯಾನವನಕ್ಕೆ ಮಾನವ ಹಕ್ಕುಗಳ ಹೋರಾಟಗಾರ ಫಾ.ಸ್ಟ್ಯಾನ್ ಸ್ವಾಮಿ ಹೆಸರಿಡುವುದಕ್ಕೆ ಇತ್ತೀಚೆಗೆ ಎಬಿವಿಪಿ, ವಿ.ಎಚ್.ಪಿ., ಹಿಂಜಾವೇ ಸೇರಿದಂತೆ ಸಂಘ ಪರಿವಾರದ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಫಾ.ಸ್ಟ್ಯಾನ್ ಸ್ವಾಮಿ ಹೆಸರಿಡುವ ಪ್ರಸ್ತಾಪವನ್ನು ಅಲೋಶಿಯಸ್ ಶಿಕ್ಷಣ ಸಂಸ್ಥೆಯು ತಾತ್ಕಾಲಿಕವಾಗಿ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News