ಜೆಎನಯ ವಿದ್ಯಾರ್ಥಿ ಶರ್ಜೀಲ್‌ ಗೆ ಜಾಮೀನು ನಿರಾಕರಣೆ: ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿದ ಕೋರ್ಟ್

Update: 2021-10-22 17:44 GMT

 ಹೊಸದಿಲ್ಲಿ,ಅ.22: ಜೆಎನಯ  ವಿದ್ಯಾರ್ಥಿ ಹಾಗೂ ಕಾರ್ಯಕರ್ತ ಶರ್ಜೀಲ್ ಇಮಾಮ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದ ಇಲ್ಲಿಯ ನ್ಯಾಯಾಲಯವು,‘ನಾವು ನಮ್ಮ ಚಿಂತನೆಗಳಿಂದ ಮಾಡಲ್ಪಟ್ಟಿದ್ದೇವೆ,ಹೀಗಾಗಿ ನೀವು ಏನನ್ನು ಚಿಂತಿಸುತ್ತೀರಿ ಎಂಬ ಬಗ್ಗೆ ಕಾಳಜಿ ವಹಿಸಿ. ಶಬ್ದಗಳು ದ್ವಿತೀಯವಾಗಿವೆ,ಚಿಂತನೆಗಳು ಜೀವಂತವಿರುತ್ತವೆ ಮತ್ತು ನಮ್ಮಿಂದಿಗೆ ಸಾಗುತ್ತವೆ ’ಎಂಬ ಸ್ವಾಮಿ ವಿವೇಕಾನಂದರ ಮಾತುಗಳನ್ನು ಉಲ್ಲೇಖಿಸಿತು.

ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆಗಳ ಸಂದರ್ಭ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇಮಾಮ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನುಜ ಅಗರವಾಲ್ ಅವರು,‘2019,ಡಿ.13ರಂದು ಶರ್ಜೀಲ್ ಮಾಡಿದ್ದ ಭಾಷಣವನ್ನು ಸರಳವಾಗಿ ಓದಿದರೂ ಅದರಲ್ಲಿ ಕೋಮುವಾದಿ ಮತ್ತು ವಿಭಜನಾಕಾರಿ ಸಾಲುಗಳಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ನನ್ನ ಅಭಿಪ್ರಾಯದಲ್ಲಿ ಅವರ ಪ್ರಚೋದನಾತ್ಮಕ ಭಾಷಣದ ಧಾಟಿಯು ಸಾಮಾಜಿಕ ನೆಮ್ಮದಿ,ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿತ್ತು. ಈ ಹಂತದಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಲು ನಾನು ಇಚ್ಛಿಸುವುದಿಲ್ಲ ’ಎಂದು ಹೇಳಿದರು.

ಆದಾಗ್ಯೂ ಕಾನೂನಿನ ಸ್ಥಾಪಿತ ನಿಲುವನ್ನು ದೃಷ್ಟಿಯಲ್ಲಿಟ್ಟುಕೊಂಡು ಶರ್ಜೀಲ್ ಭಾಷಣವು ಐಪಿಸಿಯ ಕಲಂ 124 ಎ(ದೇಶದ್ರೋಹ) ವ್ಯಾಪ್ತಿಯಲ್ಲಿ ಬರುತ್ತದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸಲು ಸೂಕ್ತ ಹಂತದಲ್ಲಿ ಆಳವಾದ ವಿಶ್ಲೇಷಣೆಯ ಅಗತ್ಯವಿದೆ ಎಂದು ನ್ಯಾಯಾಲಯವು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News