ಬೈಕಂಪಾಡಿ; ದೈವಸ್ಥಾನದಲ್ಲಿ ಕಳ್ಳತನ ಯತ್ನ ಪ್ರಕರಣ: ಆರೋಪಿ ರೋಹಿತಾಶ್ವ ಬಂಧನ

Update: 2021-10-22 11:30 GMT
ರೋಹಿತಾಶ್ವ 

ಮಂಗಳೂರು, ಅ.22: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯಲ್ಲಿರುವ ಕರ್ಕೇರ ಮೂಲಸ್ಥಾನದ ದೈವಸ್ಥಾನದಲ್ಲಿ ನಡೆದ ಕಳ್ಳತನ ಯತ್ನ ಹಾಗೂ ದೈವಸ್ಥಾನದ ಮೂರ್ತಿಗಳನ್ನು ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಳಾಯಿ ನಿವಾಸಿ ರೋಹಿತಾಶ್ವ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬೈಕಂಪಾಡಿ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಈ ಆರೋಪಿ ದೈವಸ್ಥಾನದಲ್ಲಿ ಚಿನ್ನ ಬೆಳ್ಳಿ ಆಭರಣ, ಹಣದ ಆಸೆಗೆ ಕಳ್ಳತನಕ್ಕೆ ಮುಂದಾಗಿದ್ದು, ಅಲ್ಲಿ ಏನೂ ಸಿಗದಾಗ ಮೂರ್ತಿಯನ್ನು ಭಗ್ನಗೊಳಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯಲ್ಲಿರುವ ಕರ್ಕೇರ ಮೂಲಸ್ಥಾನದ ದೈವಸ್ಥಾನದಲ್ಲಿ ಅಪಾರವಾದ ಚಿನ್ನ, ಬೆಳ್ಳಿ ಆಭರಣ ಹಾಗೂ ಹಣ ಇರುತ್ತದೆ ಎಂದು ತಿಳಿದು ಕಳ್ಳತನ ಮಾಡಲು ದೈವಸ್ಥಾನಕ್ಕೆ ನುಗ್ಗಿ ಕಾಣಿಕೆ ಡಬ್ಬಿ ಮತ್ತು ಕಚೇರಿ ಒಳಗಿರುವ ಕಪಾಟು ಒಡೆದು ಹುಡುಕಾಡಿರುವ ಆರೋಪಿ ಏನೂ ಸಿಗದಾಗ ಹತಾಶಗೊಂಡು ಅಲ್ಲಿದ್ದ ಈಶ್ವರ, ನಾಗದೇವರ ಮೂರ್ತಿಗಳನ್ನು ಹೊರಗಡೆ ಬಿಸಾಕಿ ಭಗ್ನಗೊಳಿಸಿದ್ದ. ಈ ಸಂಬಂಧ ಅ. 17ರಂದು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಅ. 21ರಂದು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News