ಅಂಪಾರು ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಪತ್ನಿ ಸಹಿತ ಐವರು ಆರೋಪಿಗಳ ಬಂಧನ

Update: 2021-10-22 15:34 GMT

ಶಂಕರನಾರಾಯಣ, ಅ.22: ಅಂಪಾರಿನಲ್ಲಿ ಅ.19ರಂದು ನಡೆದಿದ್ದ ವ್ಯಕ್ತಿಯೋರ್ವರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅದೀಗ ಕೊಲೆ ಪ್ರಕರಣವಾಗಿ ಪರಿವರ್ತನೆಯಾಗಿದೆ. ಈ ಕೊಲೆ ಪ್ರಕರಣ ಸಂಬಂಧ ಮೃತನ ಪತ್ನಿ ಸಹಿತ ಐವರನ್ನು ಬಂಧಿಸಲಾಗಿದೆ.

ಆರೋಪಿಗಳಲ್ಲಿ ಇಬ್ಬರು ಬಾಲಕರಾಗಿದ್ದು, ಅವರನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದೆ. ಮೂಲತ ಸಾಗರ ತಾಲೂಕಿನ ಸುಳಗೋಡುವಿನವರಾಗಿದ್ದು, ಮದುವೆಯ ಬಳಿಕ ಅಂಪಾರು ಗ್ರಾಮದ ವಿವೇಕ ನಗರದಲ್ಲಿ ಹೆಂಡತಿ ಮನೆಯಲ್ಲಿ ವಾಸವಾಗಿದ್ದ ನಾಗರಾಜ (36) ಅವರು ಕೊಲೆಗೀಡಾದವರು.

ಪ್ರಕರಣ ಸಂಬಂಧ ಆರೋಪಿ ಪತ್ನಿ ಮಮತಾ (34), ಆಕೆಯ ಪರಿಚಿತರಾಗಿರುವ ಕುಮಾರ್ ಹಾಗೂ ದಿನಕರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಇಬ್ಬರು ಬಾಲಕರನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದೆ.

ಸಹೋದರಿಯಿಂದ ದೂರು

ಅ.19ರ ಬೆಳಗ್ಗೆ ತಮ್ಮನ ಸಾವಿನ ಬಗ್ಗೆ ಬಂದ ದೂರವಾಣಿ ಮಾಹಿತಿಯಂತೆ ಸಾಗರದಿಂದ ಧಾವಿಸಿ ಬಂದ ನಾಗರಾಜನ ಅಕ್ಕ ನಾಗರತ್ನ, ತಮ್ಮನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದರು. ಶವಾಗಾರದಲ್ಲಿದ್ದ ಶವವನ್ನು ಕುಟುಂಬದವರು ಪರೀಕ್ಷಿಸಿದಾಗ ಮೈಮೇಲೆ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳು ಕಂಡುಬಂದಿದ್ದವು. ದೇಹದ ಮೇಲಿದ್ದ ಕೆಲವೊಂದು ಗಾಯಗಳ ಕುರುಹುಗಳಿಂದ ಇದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಎಂದು ನಾಗರಾಜ ಅವರ ಸಹೋದರಿ ನಾಗರತ್ನಾ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನಂತೆ ಶಂಕರನಾರಾಯಣ ಪೊಲೀಸರು ತನಿಖೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News