ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಪ್ರಕರಣ ಮುಚ್ಚಿಹಾಕುವ ಯತ್ನ ಆರೋಪದಲ್ಲಿ ಮಹಿಳೆಯ ಬಂಧನ

Update: 2021-10-22 14:00 GMT

ಮಂಗಳೂರು, ಅ.22: ಮಂಗಳೂರು ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಿರುದ್ಧ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ಮುಚ್ಚಿ ಹಾಕುವ ಯತ್ನದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಬಿಜೈ ಕಾಪಿಕಾಡ್ ನಿವಾಸಿ ಪವಿತ್ರ ಆಚಾರ್ಯ ಎಂದು ಗುರುತಿಸಲಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಈಕೆ ಫಿರ್ಯಾದಿಯ ಇಚ್ಚೆಗೆ ವಿರುದ್ಧವಾಗಿ ಸುಳ್ಳು ಹೇಳಿಕೆ ನೀಡಿಸಿದ ಆರೋಪದಲ್ಲಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಲೈಂಗಿಕ ಕಿರುಕುಳ ಆರೋಪ ಪ್ರಕರಣದ ಸಂತ್ರಸ್ತೆ ಯುವತಿಯ ಸ್ನೇಹಿತೆಗೆ ಮಹಿಳಾ ಜಾಗೃತ ವೇದಿಕೆಯ ಅಧ್ಯಕ್ಷೆ ಎಂದು ಹೇಳಿಕೊಂಡು ಕಾನೂನು ನೆರವು ನೀಡುವುದಾಗಿ ಹೇಳಿ ಪವಿತ್ರಾ ಆಚಾರ್ಯ ಎಂಬಾಕೆ, ಸಂತ್ರಸ್ತೆಯ ಸ್ನೇಹಿತೆಯನ್ನು ಕರೆದೊಯ್ಯುವ ನೆಪದಲ್ಲಿ ದಾರಿ ಮಧ್ಯೆ ಆಕೆಗೆ ಬೆದರಿಸಿ, ಪ್ರಕರಣದಲ್ಲಿ ಸಂತ್ರಸ್ತೆಯ ವಿರುದ್ಧವಾಗಿ ಹಾಗೂ ಆರೋಪಿಯ ಪರ ಹೇಳಿಕೆ ನೀಡುವಂತೆ ಒತ್ತಡ ಹೇರಿರುವ ಕುರಿತು ಪ್ರಕರಣ ದಾಖಲಾಗಿತ್ತು.

ಕರಂಗಲ್ಪಾಡಿಯ ಕೆಎಸ್‌ಎನ್‌ಆರ್ ಅಸೋಶಿಯೇಟ್ಸ್ ಚೇಂಬರ್ ಹಾಗೂ ಲೋಕಾಯುಕ್ತ ಎಸ್‌ಪಿಪಿ ಕೆ.ಎಸ್.ಎನ್. ರಾಜೇಶ್ (45), ಉತ್ತರ ಕನ್ನಡ ಮೂಲದ ದೃವ ಹಗೂ ಮಹಾಲಕ್ಷ್ಮಿ ಹೆಗ್ಡೆ ವಿರುದ್ಧ ಯುವತಿಯೊಬ್ಬರು ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತೆಗೆ ಬೆದರಿಕೆ ಹಾಕಿದ ಪ್ರಕರಣವನ್ನೂ ದಾಖಲಿಸಲಾಗಿತ್ತು ಎಂದು ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಪತ್ತೆಗೆ ಕ್ರಮ

ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯ ಪತ್ತೆಗೆ ಕ್ರಮ ವಹಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಂಜಿತ್ ಭಂಡಾರಿ ಅವರ ನೇತೃತ್ವದಲ್ಲಿ ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News