ಮಾರಣಾಂತಿಕ ಹಲ್ಲೆ ಪ್ರಕರಣ: ಇಬ್ಬರ ಬಂಧನ

Update: 2021-10-22 14:03 GMT

ಮಂಗಳೂರು, ಅ.22: ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿ ಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾವೂರು ಶಾಂತಿನಗರ ನಿವಾಸಿ ಝೈನುಲ್ ಆಬಿದ್ (24), ಪಂಜಿಮೊಗರು ನಿವಾಸಿ ಸಾಹುಲ್ ಹಮೀದ್ ಸಫ್ವಾನ್ (26) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ರಾಜೇಶ್ ಶೆಟ್ಟಿ ಹಲ್ಲೆಗೊಳಗಾದವರು.

ಪ್ರಕರಣ ವಿವರ: ಅ.13ರಂದು ರಾಜೇಶ್ ಶೆಟ್ಟಿ ಎಂಬವರು ಕೊಟ್ಟಾರ ಚೌಕಿಯಲ್ಲಿನ ನಾಲ್ಕನೇ ಮೈಲು ಲಾರಿ ಯಾರ್ಡ್‌ನಲ್ಲಿ ಕೆಲಸ ಮಾಡಿ ರಾತ್ರಿ 9:30ರ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದರು. ಬೈಕ್‌ನಲ್ಲಿ ಮಾಲಾಡಿ ಕಾಂಕ್ರಿಟ್ ಬ್ರಿಡ್ಜ್ ಸಮೀಪದ ರಸ್ತೆಯಲ್ಲಿ ತೆರಳುತ್ತಿದ್ದರು. ದುಷ್ಕರ್ಮಿಗಳು ಬೈಕ್‌ವೊಂದರಲ್ಲಿ ಹಿಂಬಾಲಿಸಿಕೊಂಡು ರಾಜೇಶ್ ಶೆಟ್ಟಿ ಬೈಕ್‌ಗೆ ಢಿಕ್ಕಿ ಹೊಡೆಸಿ, ಹೋದರು. ಪುನಃ ಆಗಮಿಸಿದ ದುಷ್ಕರ್ಮಿಗಳು ಮತ್ತೊಮ್ಮೆ ಬೈಕ್‌ಗೆ ಢಿಕ್ಕಿ ಹೊಡೆಸಿದರು. ಈ ವೇಳೆ ಎರಡೂ ಬೈಕ್‌ಗಳು ರಸ್ತೆಗೆ ಬಿದ್ದಾಗ ದುಷ್ಕರ್ಮಿಗಳ ಬೈಕ್‌ನಲ್ಲಿದ್ದ ಆಗಂತುಕನೋರ್ವ ರಾಜೇಶ್‌ಗೆ ಹರಿತವಾದ ಆಯುಧದಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಅಪರಾಧ ಹಿನ್ನೆಲೆ: ಆರೋಪಿ ಝೈನುಲ್ ಆಬಿದ್ ವಿರುದ್ಧ ಕಾವೂರು ಠಾಣೆಯಲ್ಲೇ 2019ರಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಎರಡನೇ ಆರೋಪಿ ಸಾಹುಲ್ ಹಮೀದ್ ಸಫ್ವಾನ್ ವಿರುದ್ಧ ಕಾವೂರು ಠಾಣೆಯಲ್ಲಿ 2015, 2017, 2019ರಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News