×
Ad

ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ದ.ಕ.ಒಕ್ಕೂಟ ರಾಜ್ಯಕ್ಕೆ ಪ್ರಥಮ : ರವಿರಾಜ ಹೆಗ್ಡೆ

Update: 2021-10-22 19:42 IST

ಉಡುಪಿ, ಅ.22: ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ರಾಜ್ಯದ 14 ಒಕ್ಕೂಟಗಳಲ್ಲಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮೊದಲ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಜಿಲ್ಲೆಯ ಹೈನುಗಾರರ ಸಹಕಾರ ಪ್ರಮುಖ ಪಾತ್ರ ವಹಿಸಿದೆ ಎಂದು ದ.ಕ.ಹಾಲು ಉತ್ಪಾದಕರ ಒಕ್ಕೂಟದ ಮಂಗಳೂರು ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದ್ದಾರೆ.

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಶುಕ್ರವಾರ ನಡೆದ ರಾಸುಗಳ ಕೃತಕ ಗರ್ಭಧಾರಣಾ ಪುನರ್‌ಮನನ ತರಬೇತಿ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

14 ಒಕ್ಕೂಟಗಳ ಪೈಕಿ ರೈತರಿಗೆ ಅತೀ ಹೆಚ್ಚಿನ ದರವನ್ನು ಹಾಲಿಗೆ ನಾವು ಪಾವತಿಸುತಿದ್ದೇವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿಯಲ್ಲಿ ಹಾಲು ಉತ್ಪಾದನ ವೆಚ್ಚ ಅಧಿಕ. ಹಸುಗಳಿಗೆ ಹಸುರು ಮೇವು ಸಹಿತ ಇತರ ಕೊರತೆ ಗಳೂ ಇವೆ. ಕೂಲಿಯಾಳುಗಳ ವೆಚ್ಚವೂ ಅಧಿಕವಿದೆ. ಇದರ ಹೊರತಾಗಿಯೂ ನಾವು ರೈತರಿಗೆ ಹೆಚ್ಚಿನ ದರವನ್ನು ನೀಡುತಿದ್ದೇವೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶೋಧನೆಗಳ ಫಲ ತಳಮಟ್ಟಕ್ಕೆ ತಲುಪುವಾಗ ಸಾಕಷ್ಟು ವಿಳಂಬವಾಗುತ್ತಿದೆ. ಇಲ್ಲಿಗೆ ತಲುಪುವಾಗ ಸಾಕಷ್ಟು ಬದಲಾವಣೆಯಾಗಿರುತ್ತದೆ. ಆದುದರಿಂದ ಇದರ ಫಲ ಕಾಲಕಾಲಕ್ಕೆ ರೈತರಿಗೆ ತಲುಪುವಂತಾಗಬೇಕು ಎಂದರು.

ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ, ರಾಜ್ಯ ಸಹಕಾರಿ ಮಹಾಮಂಡಲದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು. ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಹರ್ಕಜೆ, ಸ್ಮಿತಾ ಶೆಟ್ಟಿ, ಸಾಣೂರು ನರಸಿಂಹ ಕಾಮತ್, ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ.ಸುರೇಶ್ ಉಪಸ್ಥಿತರಿದ್ದರು.

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಕೃಷ್ಣಮೂರ್ತಿ ಉಪಾಧ್ಯ ಸ್ವಾಗತಿಸಿದರು. ಶೇಖರಣೆ, ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ ಪ್ರಸ್ತಾವಿಕ ಮಾತುಗಳನ್ನಾಡಿದರು. ಡಾ. ಟಿ. ವಿ.ಶ್ರೀನಿವಾಸ ವಂದಿಸಿ, ಡಾ.ಶೀತಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News