ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಬಾರ್ ಕೌನ್ಸಿಲ್‌ನಿಂದ ನ್ಯಾಯವಾದಿ ರಾಜೇಶ್ ಅಮಾನತು

Update: 2021-10-22 14:25 GMT
ರಾಜೇಶ್ 

ಮಂಗಳೂರು, ಅ.22: ಇಂಟರ್ನ್‌ಶಿಪ್‌ಗೆಂದು ಬಂದಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ಎಂಬಾತನನ್ನು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ (ಕೆಎಸ್‌ಬಿಸಿ) ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ರಾಜೇಶ್ ವಿರುದ್ಧ ಎರಡು ಪ್ರಕರಣಗಳು (78/2021 ಮತ್ತು 79/2021) ದಾಖಲಾಗಿದ್ದು, ತನಿಖೆ ನಡೆದಿದೆ. ಗಂಭೀರ ಆರೋಪ ಹೊತ್ತಿರುವ ನ್ಯಾಯವಾದಿಯನ್ನು ಬಾರ್ ಕೌನ್ಸಿಲ್ ಅಧ್ಯಕ್ಷ ಶ್ರೀನಿವಾಸ ಬಾಬು ನೇತೃತ್ವದ ಸಮಿತಿ ಅಮಾನತುಗೊಳಿಸಿದೆ. ರಾಜೇಶ್ ವಿರುದ್ಧ ಆರೋಪದ ಎಫ್‌ಐಆರ್ ಹಾಗೂ ದೂರುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಸುಮೊಟೊ ಕೇಸನ್ನು ದಾಖಲಿಸಲಾಗಿದೆ.

ನಗರದ ಕರಂಗಲ್ಪಾಡಿಯ ಸೀತಾರಾಮಯ್ಯ ಎಂಬವರ ಪುತ್ರ ರಾಜೇಶ್ ಅವರು 2001ರಲ್ಲಿ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ (Kar/1464/2001) ಮಾಡಿಕೊಂಡಿದ್ದರು. ರಾಜೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನ್ಯಾಯವಾದಿಗಳ ಕಾಯ್ದೆಯ 35ನೇ ಸೆಕ್ಷನ್ ಅಡಿಯಲ್ಲಿ ಮುಂದಿನ ಆದೇಶದವರೆಗೆ ಈ ಅಮಾನತು ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಾರ್ ಕೌನ್ಸಿಲ್‌ನಿಂದ ರಾಜೇಶ್ ಅಮಾನತುಗೊಂಡಿದ್ದರಿಂದ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ವಕಾಲತು ವಹಿಸುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಹಿರಿಯ ನ್ಯಾಯವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ನಿರೀಕ್ಷಣಾ ಜಾಮೀನಿಗೆ ಅರ್ಜಿ: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ರಾಜೇಶ್ ಅವರಿಗಾಗಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಖ್ಯಾತ ಅಪರಾಧ ನ್ಯಾಯವಾದಿಯೊಬ್ಬರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News