​ಮಂಗಳೂರಿನ ತಂಡದಿಂದ ವಿಶ್ವದರ್ಜೆಯ ವೀಡಿಯೋ ಹಾಡು

Update: 2021-10-22 15:16 GMT

ಮಂಗಳೂರು, ಅ. 22: ಪ್ರಾದೇಶಿಕ ಭಾಷೆಯಾದ ತುಳುವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಮಂಗಳೂರಿನ ತಂಡವೊಂದು ವಿಶ್ವ ದರ್ಜೆ ಗುಣಮಟ್ಟದ ಡ್ಯಾನ್ಸ್ ವೀಡಿಯೊ ಸಾಂಗ್ ‘ಡ್ಯಾನ್ಸ್ ಡ್ಯಾನ್ಸ್’ ಅನ್ನು ರಚಿಸಿದ್ದಾರೆ. ಅಮೆರಿಕದ ಬಿಎಂಎಸ್ ರೇಡಿಯೋ ನೆಟ್‌ವರ್ಕ್ ಚಿಕಾಗೋದಲ್ಲಿ ಪ್ರಸಾರಗೊಳ್ಳುತ್ತಿರುವ ಮೊದಲ ತುಳು ಹಾಡು ಇದಾಗಿದೆ ಎಂದು ಹಾಡಿನ ನಿರ್ದೇಶಕ, ವೈದ್ಯ ಡಾ. ನಿತಿನ್ ಎಸ್. ಅವರು ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೃತ್ತಿಪರವಾಗಿ ತಯಾರಿಸಿದ ಆಕರ್ಷಕ ನೃತ್ಯ ಸಂಯೋಜನೆ ಹೊಂದಿರುವ ಈ ಹಾಡು ಎನ್ ಆ್ಯಂಡ್ ಎನ್ (ಡಾ ನಿತಿನ್ ಆ್ಯಂಡ್ ನಿಶಾನ್ ಎಸ್.) ಕ್ರಿಯೆಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ 1.3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿ ಟ್ರೆಂಡಿಂಗ್‌ನಲ್ಲಿದೆ ಎಂದು ಹೇಳಿದರು.

ಈಗಾಗಲೇ ದೇಶ-ವಿದೇಶದ 15ಕ್ಕೂ ಹೆಚ್ಚು ರೇಡಿಯೊ ಸ್ಟೇಷನ್‌ಗಳಲ್ಲಿ ಈ ಹಾಡು ಪ್ರಸಾರಗೊಂಡಿದೆ. ಭಾರತದ ಅತ್ಯುತ್ತಮ ಶಾರ್ಟ್ ವೀಡಿಯೋ ಆ್ಯಪ್ ಚಿಂಗಾರಿ ಜೊತೆ ಕೈ ಜೋಡಿಸಿರುವ ಮೊದಲ ತುಳು ಹಾಡು ಇದಾಗಿದ್ದು, ರೆಡ್ ಎಪಿಕ್ ಕ್ಯಾಮಾರದಲ್ಲಿ ಚಿತ್ರೀಕರಣಗೊಂಡ ಮೊದಲ ತುಳು ಆಲ್ಬಂ ಹಾಡಾಗಿದೆ. ಈ ಹಾಡನ್ನು ಭಾರತ, ಅಮೆರಿಕ, ಏಷ್ಯಾ ಮತ್ತು ಯುರೋಪಿಯನ್ ದೇಶಗಳಲ್ಲಿ ಮೆಚ್ಚಿದ್ದಾರೆ ಎಂದರು.

ಈ ಆಲ್ಬಂಗೆ ಡಾ. ಎನ್. ನಿತಿನ್ ಅವರು ನಿರ್ದೇಶಿಸಿದ್ದು, ನಿಶಾನ್ ಎಸ್. ಅವರು ಹಾಡಿದ್ದಾರೆ. ಪ್ಯಾಟ್ಸನ್ ಪೆರೇರಾ ಅವರು ಸಂಗೀತ ನಿರ್ದೇಶಿಸಿದ್ದಾರೆ. ಹಾಡಿನ ಸಂಯೋಜನೆಯನ್ನು ಟೀಮ್ ವೆಲಾಸಿಟಿ ಖ್ಯಾತಿಯ ವಿಜೇತ್. ಆರ್. ನಾಯಕ್ ಮಾಡಿದ್ದಾರೆ. ಪ್ರಮುಖ ನಟನಾಗಿ ಸಿದ್ಧಾರ್ಥ್ ಶೆಟ್ಟಿ , ನಟಿಯಾಗಿ ವಿಜೇತಾ ಪೂಜಾರಿ ನಟಿಸಿದ್ದಾರೆ. ಸಂಗೀತ ವೀಡಿಯೋದಲ್ಲಿ ವಿನೀತ್, ವಿಕಾಸ್ ಪುತ್ರನ್ ಕಾಣಿಸಿಕೊಂಡಿದ್ದಾರೆ. ಮೋಹನ್ ರಾಜ್, ಡಾ ನಿತಿನ್ ಸಾಹಿತ್ಯ ಬರೆದಿದ್ದಾರೆ. https://www.youtube.com/watch?v=6TkzqPcTMpM ಲಿಂಕ್ ಕ್ಲಿಕ್ ಮಾಡುವ ಮುಖೇನ ಹಾಡು ವೀಕ್ಷಿಸಬಹುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಿಶಾನ್ ಎಸ್., ಸಿದ್ಧಾರ್ಥ್ ಶೆಟ್ಟಿ, ಪ್ಯಾಟ್ಸನ್‌ ಪಿರೇರಾ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News