×
Ad

ದೇಶಾದ್ಯಂತ ‘ಸಮುದಾಯ ಅಡುಗೆ ಮನೆ’ ಆರಂಭಿಸಲು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

Update: 2021-10-22 21:47 IST

ಹೊಸದಿಲ್ಲಿ, ಅ. 22: ಹಸಿವು ಹಾಗೂ ಪೋಷಕಾಂಶದ ಕೊರತೆ ವಿರುದ್ಧ ಹೋರಾಡಲು ದೇಶಾದ್ಯಂತ ಸಮುದಾಯ ಅಡುಗೆ ಮನೆ (ಕಮ್ಯೂನಿಟಿ ಕಿಚನ್) ಆರಂಭಕ್ಕೆ ಯೋಜನೆ ರೂಪಿಸಲು ಎಲ್ಲ ರಾಜ್ಯಗಳು ಹಾಗೂ ಕೇಂದ್ರಡಾಳಿದ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ. 

ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಸೋಂಕು ಅಲ್ಲೋಲ ಕಲ್ಲೋಲ ಉಂಟು ಮಾಡಿದ ಈ ಸಂದರ್ಭದಲ್ಲಿ ‘ಸಮುದಾಯ ಅಡುಗೆ ಮನೆ’ಅತಿ ಮುಖ್ಯವಾದದು ಎಂದು ವಕೀಲ ಅಸೀಮಾ ಮಂದ್ಲಾ ಅವರು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಹೀಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠವನ್ನು ಆಗ್ರಹಿಸಿದರು. 

ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣನ್ ಈ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ನಿಗದಿ ಪಡಿಸಿದರು. ಬಡವರಿಗಾಗಿ ಸಮುದಾಯ ಅಡುಗೆ ಮನೆ ಆರಂಭಿಸುವ ಕುರಿತು ಯೋಜನೆ ರೂಪಿಸುವಂತೆ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ತಮ್ಮ ಅಫಿಡವಟ್ ಸಲ್ಲಿಸುವಂತೆ ಸೂಚಿಸಿ ನೀಡಿದ ತನ್ನ ನಿರ್ದೇಶನವನ್ನು ಅನುಸರಿಸದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಫೆಬ್ರವರಿ 17ರಂದು 6 ರಾಜ್ಯಗಳಾದ ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒಡಿಸಾ, ಗೋವಾ ಹಾಗೂ ದಿಲ್ಲಿಗೆ ತಲಾ 5 ಲಕ್ಷ ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಸೂಚಿಸಿತ್ತು. 

ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಕ್ರಿಯೆ ಸಲ್ಲಿಸಿದ ಎಲ್ಲ ರಾಜ್ಯಗಳ ಪಟ್ಟಿಯನ್ನು ದೂರುದಾರರ ಪರವಾಗಿ ಹಾಜರಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ಸಲ್ಲಿಸಿದ ದೂರುದಾರರ ಪರ ವಕೀಲರು ಯಾಕೆ ರೂಪಿಸಬಾರದು ಎಂದು ಪೀಠ ವಕೀಲೆ ಅಸೀಮಾ ಮಂದ್ಲಾ ಅವರನ್ನು ಪ್ರಶ್ನಿಸಿತು. ಪೋಷಕಾಂಶಗಳ ಕೊರತೆಯಿಂದ ಶೇ. 69 ಮಕ್ಕಳು 5 ವರ್ಷದ ಒಳಗೆ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಆದುದುದರಿಂದ ‘ಸಮುದಾಯ ಅಡುಗೆ ಮನೆ’ ಆರಂಭಿಸಲು ರಾಜ್ಯಗಳಿಗೆ ಇದು ಉತ್ತಮ ಸಮಯ ಎಂದು ಅಸೀಮಾ ಮಂದ್ಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News