ನನ್ನಿಷ್ಟದಂತೆ ಜೀವಿಸಲು ತೀರ್ಮಾನ: ಆಸಿಯಾ ಇಬ್ರಾಹೀಂ ಖಲೀಲ್

Update: 2021-10-22 17:45 GMT

ಮಂಗಳೂರು, 22: ‘ನನ್ನನ್ನು ನನ್ನ ಪತಿ ಸ್ವೀಕರಿಸಿಕೊಂಡು ಪತಿಯ ಮನೆಗೆ ಸೇರಿಸಿಕೊಳ್ಳಬೇಕೆಂದು ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದು, ಇದೀಗ ಯಾವುದೇ ಸ್ಪಂದನೆ ಸಿಗದ ಕಾರಣ ಹೋರಾಟದಿಂದ ಹಿಂದೆ ಸರಿದು ನನ್ನಿಷ್ಟದಂತೆ ಜೀವಿಸಲು ತೀಮಾನಿಸಿದ್ದೇನೆ’’ ಎಂದು ಆಸಿಯಾ ಇಬ್ರಾಹೀಂ ಖಲೀಲ್ ಕಟ್ಟೆಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ತನ್ನ ಹೋರಾಟದಲ್ಲಿ ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲರೂ ಸಹಕರಿಸಿದ್ದಾರೆ. ನಾನು ಕಳೆದೆರಡು ವರ್ಷಗಳಿಂದ ಮಾಡಿರುವ ಹೋರಾಟಕ್ಕೆ ಸಮರ್ಪಕ ನ್ಯಾಯ ಸಿಗದ ಅಸಮಾಧಾನ ವಿದ್ದರೂ, ಮುಂದೆ ಸುಖಕರವಾಗಿ ಜೀವನ ಸಾಗಿಸಲು ನಿರ್ಧರಿಸಿರುವುದಾಗಿ ಹೇಳಿದರು.

ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷವಾಗಲಿ, ಧರ್ಮದ ಪ್ರತಿನಿಧಿ ಅಥವಾ ಯಾವುದೇ ಜಾತಿಯ ಸಂಘ ಸಂಸ್ಥೆಗಳಾಗಳಿ ತನ್ನ ಪರವಾಗಿ ಅಥವಾ ವಿರುದ್ಧವಾಗಿ ಯಾವುದೇ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ಗೊಂದಲ ಉಂಟು ಮಾಡಬಾರದು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ನನ್ನ ಯಾವುದೇ ವಿಷಯಕ್ಕೆ ಇಬ್ರಾಹೀಂ ಖಲೀಲ್ ಕಟ್ಟೆಮಾರ್ ಮತ್ತು ಅವರ ಕುಟುಂಬಕ್ಕೆ ಯಾವುದೇ ಸಂಬಂಧ ಇರುವುದಿಲ್ಲ ಹಾಗೂ ಅವರ ಪರವಾಗಿ ಅಥವಾ ವಿರುದ್ಧವಾಗಿ ಯಾವುದೇ ಹೇಳಿಕೆಯನ್ನು ಸಾಮಾಜಿಕ ಜಾಲತಾಣ, ಮಾಧ್ಯಮದಲ್ಲಿ ನೀಡುವುದಿಲ್ಲ. ನಮ್ಮ ನಡುವೆ ಈ ಮೊದಲು ಪೊಲೀಸ್ ಠಾಣೆಯಲ್ಲಿ ಮತ್ತು ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವನ್ನು ಸ್ವ ಇಚ್ಛೆಯಿಂದ ಹಿಂಪಡಯುವುದಾಗಿ ಅವರು ಹೇಳಿದರು.

ಶರೀಯತ್ ಕಾನೂನಿನ ಪ್ರಕಾರ ತಾನು ವಿವಾಹವಾಗಿದ್ದು, ಮುಂದೆ ತನ್ನಂತಹ ನೊಂದ ಮಹಿಳೆಯರಿಗೆ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯ ಮುಂದುವರಿಸಲು ನಿರ್ಧರಿಸಿರುವುದಾಗಿ ಅವರು ಹೇಳಿದರು.

ಗೋಷ್ಠಿಯಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್, ಇಬ್ರಾಹಿಂ ಕತ್ತಾರ್, ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News