ಸ್ವೀಡನ್ ನ ಖ್ಯಾತ ರ‍್ಯಾಪ್‌ ಗಾಯಕ ಇನಾರ್ ಹತ್ಯೆ

Update: 2021-10-22 18:10 GMT
photo:twitter/@Independent

ಸ್ಟಾಕ್ ಹೋಂ, ಅ.22: ಸ್ವೀಡನ್ ನ ಖ್ಯಾತ ಯುವ ರ‍್ಯಾಪ್‌ ಗಾಯಕ ಇನಾರ್ ಮೇಲೆ ದುಷ್ಕರ್ಮಿಗಳು ಗುರುವಾರ ರಾತ್ರಿ ಗುಂಡು ಹಾರಿಸಿದ್ದು ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಅಪಾರ್ಟ್ಮೆಂಟ್ ಹೊರಗೆ ನಿಂತಿದ್ದ ಇನಾರ್ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆಸಲಾಗಿದ್ದು ತೀವ್ರ ಗಾಯಗೊಂಡು ಕುಸಿದುಬಿದ್ದ ಅವರಿಗೆ ಪ್ರಥಮ ಚಿಕಿತ್ಸೆ ಒದಗಿಸಿದರೂ ಅವರು ಬದುಕುಳಿಯಲಿಲ್ಲ. ಶಂಕಿತ ದುಷ್ಕರ್ಮಿಗಳ ಪತ್ತೆಗೆ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸ್ಟಾಕ್ ಹೋಂ ಪೊಲೀಸ್ ವಕ್ತಾರೆ ಟೋವ್ ಹಾಗ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಸ್ವೀಡನ್ ನ ಪದ್ಧತಿಯಂತೆ, ಮೃತ ವ್ಯಕ್ತಿ ಇನಾರ್ ಎಂದು ಪೊಲೀಸರು ಇನ್ನಷ್ಟೇ ದೃಢಪಡಿಸಬೇಕಿದೆ, ಆದರೆ ಸ್ವೀಡನ್ ನ ಪ್ರಮುಖ ಮಾಧ್ಯಮಗಳು ಮೃತ ವ್ಯಕ್ತಿ ಇನಾರ್ ಎಂದು ಪ್ರಕಟಿಸಿವೆ.

ಹಲವು ಯುವ ಜನರ ಮೇಲೆ ಪ್ರಭಾವ ಬೀರಿದ್ದ ಓರ್ವ ಪ್ರತಿಭಾನ್ವಿತ ಯುವ ಗಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸ್ವೀಡನ್ ಪ್ರಧಾನಿ ಸ್ಟೀನ್ ಲಾಫ್ವೆನ್ ಸಂತಾಪ ಸೂಚಿಸಿದ್ದಾರೆ.

19 ವರ್ಷದ ನಿಲ್ಸ್ ಕರ್ಟ್ ಎರಿಕ್ ಇನಾರ್ ಗ್ರಾನ್ ಬರ್ಗ್ ಸ್ವೀಡನ್ ನ ರ್ಯಾಪ್ ಸಂಗೀತವಲಯದಲ್ಲಿ ಇನಾರ್ ಎಂದೇ ಪ್ರಸಿದ್ಧರಾದವರು. ಇವರ ಬಹುತೇಕ ಹಾಡುಗಳಲ್ಲಿ ಅಪರಾಧ ಬದುಕು, ಡ್ರಗ್ಸ್, ಮಾರಕ ಆಯುಧಗಳ ಕುರಿತ ಉಲ್ಲೇಖವಿರುತ್ತದೆ. ಪ್ರತಿಸ್ಫರ್ಧಿ ಗಾಯಕ ಯಾಸಿನ್ ರೊಂದಿಗೆ ದ್ವೇಷ ಕಟ್ಟಿಕೊಂಡಿದ್ದ ಇನಾರ್ ರನ್ನು 2020ರಲ್ಲಿ ಅಪಹರಿಸಲಾಗಿತ್ತು. ಈ ಪ್ರಕರಣದಲ್ಲಿ ಯಾಸಿನ್ ಗೆ 10 ತಿಂಗಳ ಜೈಲುಶಿಕ್ಷೆಯಾಗಿತ್ತು. ಸ್ವೀಡನ್ ನ ಗ್ರಾಮೀ ಪುರಸ್ಕಾರ ಸಹಿತ ಹಲವು ಸಂಗೀತ ಪ್ರಶಸ್ತಿ ಪಡೆದಿರುವ ಇನಾರ್ 2019ರಲ್ಲಿ ಹೊರತಂದ ‘ ದಿ ಕ್ಯಾಟ್ ಇನ್ ದಿ ಏರಿಯಾ’ ಹಾಡು ಸ್ವೀಡನ್ ನಲ್ಲಿ ನಂ.1 ರ‍್ಯಾಪ್‌ ಹಾಡಿನ ಹಿರಿಮೆಗೆ ಪಾತ್ರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News