ರಶ್ಯ: ಗನ್ ಪೌಡರ ಸ್ಥಾವರದಲ್ಲಿ ಬೆಂಕಿ ಅನಾಹುತ 15 ಮಂದಿ ಮೃತ್ಯು, ಹಲವರಿಗೆ ಗಾಯ

Update: 2021-10-22 18:20 GMT
photo:reuters

ಮಾಸ್ಕೋ, ಅ.22: ಮಾಸ್ಕೋದ ಆಗ್ನೇಯದಲ್ಲಿರುವ ರ್ಯಾಝನ್ ವಲಯದಲ್ಲಿರುವ ಮದ್ದುಗುಂಡುಗಳ ಪೌಡರ್ ತಯಾರಿಸುವ ಸ್ಥಾವರದಲ್ಲಿ ಶುಕ್ರವಾರ ಭೀಕರ ಅಗ್ನಿದುರಂತ ಸಂಭವಿಸಿದ್ದು ಕನಿಷ್ಟ 15 ಮಂದಿ ಮೃತರಾಗಿದ್ದು ಹಲವರು ಗಾಯಗೊಂಡಿದ್ದಾರೆ. ಸ್ಥಾವರದೊಳಗಿದ್ದ ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲೆಸ್ನೋಯೆ ಎಂಬ ಗ್ರಾಮದಲ್ಲಿರುವ ಪಿಜಿಯುಪಿ ಇಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೈಗಾರಿಕೆಗಳ ಬಳಕೆಗೆ ಹಾಗೂ ಸೇನೆಯ ಬಳಕೆಗೆ ಮದ್ದುಗುಂಡು ಪೌಡರ್ ತಯಾರಿಸಲಾಗುತ್ತಿದ್ದು ಸ್ಥಾವರದ ಕಟ್ಟಡ ಬೆಂಕಿಯಿಂದ ತೀವ್ರ ಹಾನಿಗೊಂಡಿದೆ. ಬೆಂಕಿಯ ಕೆನ್ನಾಲಗೆ ಹಾಗೂ ಕಪ್ಪಾದ ಹೊಗೆಯ ಪ್ರಭಾವದಿಂದ ಸುತ್ತಮುತ್ತಲಿನ ಪ್ರದೇಶದ ಜನತೆಗೆ ಸಮಸ್ಯೆಯಾಗಿದೆ. 15 ಮಂದಿ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ. ಸ್ಥಾವರದಲ್ಲಿದ್ದ ಓರ್ವ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದಿಲ್ಲ. ಈ ಸ್ಥಾವರಕ್ಕೆ ತಂತ್ರಕುಶಲತೆಯ ಸಂಸ್ಥೆಯ ಸ್ಥಾನಮಾನ ನೀಡಲಾಗಿದೆ. ಬೆಂಕಿ ಅನಾಹುತದ ಬಗ್ಗೆ ಶುಕ್ರವಾರ ಬೆಳಿಗ್ಗೆ 8:22 ಗಂಟೆಗೆ ಕರೆ ಬಂದಾಗ ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಇಲಾಖೆಯ ಪ್ರಭಾರಿ  ಮುಖ್ಯಸ್ಥರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಾವರದಲ್ಲಿ ಸುರಕ್ಷಾ ಕ್ರಮ ಹಾಗೂ ತಾಂತ್ರಿಕ ಪ್ರಕ್ರಿಯೆಯ ನಿಯಮ ಉಲ್ಲಂಘನೆಯಾಗಿರುವ ಸಾಧ್ಯತೆಯಿದೆ ಎಂದು ರಶ್ಯದ ತುರ್ತು ವಿಪತ್ತು ನಿರ್ವಹಣೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಗಂಭೀರ ಪ್ರಮಾಣದ ಅಪರಾಧ, ದುರಂತಗಳ ತನಿಖೆ ನಡೆಸುವ ರಶ್ಯದ ತನಿಖಾ ಸಮಿತಿಯ ಪತ್ತೇದಾರರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸ್ಥಾವರದಲ್ಲಿ ಕೈಗಾರಿಕೆಗ ಸುರಕ್ಷಾ ಕ್ರಮ ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ. ಸುಮಾರು 170 ರಕ್ಷಣಾ ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ಅನಾಹುತ ಸಂಭವಿಸಿದ ಸಂದರ್ಭ ಸ್ಥಾವರದೊಳಗೆ 17 ಮಂದಿಯಿದ್ದರು ಎಂದು ಸ್ಥಳೀಯರನ್ನು ಉಲ್ಲೇಖಿಸಿ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News