ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿಸಲು ಎನ್ಸಿಬಿ ನನ್ನ ವಾಟ್ಸ್ ಆ್ಯಪ್ ಚಾಟ್‌ ತಪ್ಪಾಗಿ ಅರ್ಥೈಸುತ್ತಿದೆ: ಆರ್ಯನ್‌ ಖಾನ್

Update: 2021-10-23 11:57 GMT

ಹೊಸದಿಲ್ಲಿ: ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ತನ್ನ ವಾಟ್ಸ್ ಆ್ಯಪ್ ಚಾಟ್‌ಗಳನ್ನು ತಪ್ಪಾಗಿ ಅರ್ಥೈಸುತ್ತಿದೆ ಎಂದು ನಟ ಶಾರುಖ್ ಖಾನ್  ಅವರ ಪುತ್ರ ಆರ್ಯನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ  ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು Bar and Bench ವರದಿ ಮಾಡಿದೆ.

ಮುಂಬೈನ ವಿಶೇಷ ನ್ಯಾಯಾಲಯವು ಬುಧವಾರ ಜಾಮೀನು ನಿರಾಕರಿಸಿದ ನಂತರ ಖಾನ್ ಅವರು ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಅವರ ಅರ್ಜಿಯನ್ನು ಹೈಕೋರ್ಟ್ ಅಕ್ಟೋಬರ್ 26 ರಂದು ವಿಚಾರಣೆ ನಡೆಸಲಿದೆ.

ಆರ್ಯನ್  ಫೋನ್‌ನಿಂದ ಮರುಪಡೆಯಲಾದ ವಾಟ್ಸ್ ಆ್ಯಪ್ ಚಾಟ್‌ಗಳ ವ್ಯಾಖ್ಯಾನವು ತಪ್ಪಾಗಿದೆ ಮತ್ತು ನ್ಯಾಯಸಮ್ಮತವಲ್ಲ ಎಂದು ಖಾನ್  ವಾದಿಸಿದರು.

ಇದಕ್ಕೂ ಮೊದಲು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಖಾನ್ ಅವರ ಫೋನ್‌ನಲ್ಲಿ ಕಾಣಿಸಿಕೊಂಡ ಸಂದೇಶವನ್ನು ಗಮನಿಸುವಂತೆ ಕೇಳಿಕೊಂಡರು. ಅದರಲ್ಲಿ ಖಾನ್  ಹಾಗೂ  ಆತನ ಸ್ನೇಹಿತ 'ಸ್ಫೋಟ' ಮಾಡಲು ಯೋಜಿಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು ಎಂದು Live Law ವರದಿ ಮಾಡಿದೆ.

"ವಾಟ್ಸ್ ಆ್ಯಪ್  ಸಂದೇಶಗಳ ವ್ಯಾಖ್ಯಾನವು ತನಿಖಾಧಿಕಾರಿಯದ್ದು ಹಾಗೂ ಅಂತಹ ವ್ಯಾಖ್ಯಾನವು ನ್ಯಾಯಸಮ್ಮತವಲ್ಲ ಹಾಗೂ  ತಪ್ಪು" ಎಂದು 23 ವರ್ಷದ ಆರ್ಯನ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಖಾನ್ ಅವರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಜಾಮೀನು ನೀಡಿದರೆ ಸಾಕ್ಷ್ಯವನ್ನು ಹಾಳು ಮಾಡಬಹುದು ಎಂಬ ವಿಶೇಷ ನ್ಯಾಯಾಲಯದ ಅಭಿಪ್ರಾಯವನ್ನು ಖಾನ್  ಪ್ರಶ್ನಿಸಿದ್ದಾರೆ. ಕಾನೂನಿನಲ್ಲಿ ಯಾವುದೇ ಊಹೆಗೆ ಅವಕಾಶವಿಲ್ಲ ಎಂದು ಅವರ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News