ಉತ್ತರಾಖಂಡ ಮಳೆ: 12 ಚಾರಣಿಗರು ಮೃತ್ಯು, ಸಾವಿನ ಸಂಖ್ಯೆ 68 ಕ್ಕೆ ಏರಿಕೆ

Update: 2021-10-23 07:31 GMT

ಡೆಹ್ರಾಡೂನ್: ಈ ವಾರದ ಆರಂಭದಲ್ಲಿ ಹವಾಮಾನ ವೈಪರೀತ್ಯದ ನಂತರ ಉತ್ತರಾಖಂಡದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ಶುಕ್ರವಾರ ಸಾವಿನ ಸಂಖ್ಯೆ 68ಕ್ಕೆ ಏರಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಪಿಟಿಐ ವರದಿ ಮಾಡಿದೆ.

ಹರ್ಸಿಲ್ ಹಾಗೂ ಲಂಖಗಾ ಪಾಸ್ ಬಳಿ ಎರಡು ಚಾರಣಿಗರ ಗುಂಪುಗಳ ಕಾಣೆಯಾದ ಸದಸ್ಯರನ್ನು ಹುಡುಕಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.

"ಏಳು ಚಾರಣಿಗರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಹರ್ಸಿಲ್‌ನಲ್ಲಿ ನಾಪತ್ತೆಯಾಗಿದ್ದ 11 ಚಾರಣಿಗರ ಗುಂಪಿನಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ ಹಾಗೂ  ಇಬ್ಬರು ನಾಪತ್ತೆಯಾಗಿದ್ದಾರೆ. ಲಂಖಗಾ ಪಾಸ್ ಬಳಿ ನಾಪತ್ತೆಯಾಗಿದ್ದ 11 ಮಂದಿ ಚಾರಣಿಗರ ಮತ್ತೊಂದು ಗುಂಪಿನ ಐದು ಚಾರಣಿಗರ ಮೃತದೇಹಗಳು ಪತ್ತೆಯಾಗಿವೆ'' ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಸುಮಾರು ಮೂರು ದಿನಗಳ ಕಾಲ  ಸುರಿದ ಭಾರೀ ಮಳೆಯು ರಾಜ್ಯವನ್ನು ಜರ್ಜರಿತವನ್ನಾಗಿ ಮಾಡಿತು. ಭಾರೀ ಮಳೆಯು ಪ್ರವಾಹಗಳು, ಭೂಕುಸಿತಗಳು ಮತ್ತು ವಿಶೇಷವಾಗಿ ಕುಮಾನ್ ಬೆಟ್ಟಗಳಲ್ಲಿ ಅಪಾರ ಪ್ರಮಾಣದ ಆಸ್ತಿ ನಾಶಕ್ಕೆ ಕಾರಣವಾಯಿತು.

ಬಾಗೇಶ್ವರದ ಪಿಂಡಾರಿ ಹಾಗೂ  ಕಫ್ನಿ ಹಿಮನದಿಗಳ ಬಳಿ ಸಿಲುಕಿದ್ದ ಆರು ವಿದೇಶಿಗರು ಸೇರಿದಂತೆ 65 ಚಾರಣಿಗರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಇನ್ನೂ 23 ಜನರನ್ನು ಪಿಥೋರಗಡದ ದರ್ಮ ಕಣಿವೆಯಿಂದ ರಕ್ಷಿಸಲಾಗಿದೆ.

"ಎಸ್‌ಡಿಆರ್‌ಎಫ್ ತಂಡಗಳು ಪಿಂಡಾರಿ ಹಿಮನದಿಯ ಸಮೀಪದ ದ್ವಾಲಿಯಿಂದ ಆರು ಪ್ರವಾಸಿಗರನ್ನು ಒಳಗೊಂಡಂತೆ 42 ಪ್ರವಾಸಿಗರನ್ನು ಹಾಗೂ  ಕಫ್ನಿ ಹಿಮನದಿಯಲ್ಲಿ 23 ಜನರನ್ನು ರಕ್ಷಿಸಿವೆ" ಎಂದು ಬಾಗೇಶ್ವರ ಡಿಎಂ ವಿನೀತ್ ಕುಮಾರ್ ಪಿಟಿಐಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News