"ನಕಲಿ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವ ವೇಳೆ ಸಂಸ್ಥೆಯು ಬಿಜೆಪಿ ಸಂಸದನಿಗೆ ವಿನಾಯಿತಿ ನೀಡಿತ್ತು"

Update: 2021-10-23 07:20 GMT

ಹೊಸದಿಲ್ಲಿ: ಕಳೆದ ವರ್ಷ ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಕೆಲವು ಆಯ್ದ ನಕಲಿ ಖಾತೆಗಳ ವಿರುದ್ಧ ಮಾತ್ರ ಫೇಸ್ಬುಕ್ ಕ್ರಮ ಕೈಗೊಂಡಿತ್ತು ಎಂದು  ಸಂಸ್ಥೆಯ ಮಾಜಿ ಡೇಟಾ ವಿಜ್ಞಾನಿ ಪ್ರಸ್ತುತ ಸಾಮಾಜಿಕ ಹೋರಾಟಗಾರ್ತಿಯಾಗಿರುವ ಸೋಫೀ ಝಂಗ್ ಹೇಳಿದ್ದಾರೆ.

ನಕಲಿ ಖಾತೆಗಳನ್ನು ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಹೊಂದಿದ್ದರೂ  ಬಿಜೆಪಿ ಜನಪ್ರತಿನಿಧಿಯೊಬ್ಬರಿಗೆ ನೇರ ಸಂಬಂಧ ಹೊಂದಿದ್ದ ಹಲವಾರು ಖಾತೆಗಳನ್ನು ಮಾತ್ರ ಫೇಸ್ಬುಕ್ ತೆಗೆದು ಹಾಕಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

"ನಾವು ಐದು ನಕಲಿ ಖಾತೆ ಜಾಲಗಳ ಪೈಕಿ ನಾಲ್ಕನ್ನು  ತೆಗೆದುಹಾಕಿದ್ದೆವು, ಆದರೆ ಐದನೆಯದು, ಕೊನೇ ಕ್ಷಣದಲ್ಲಿ ಅದನ್ನು ತೆಗೆದುಹಾಕಬೇಕೆಂದು ಅಂದುಕೊಳ್ಳುವಷ್ಟರಲ್ಲಿ ಅದು ಬಿಜೆಪಿ ಸಂಸದರೊಬ್ಬರಿಗೆ ತಿಳಿದು ಬಂತು. ಅದು ಅವರಿಗೆ ತಿಳಿಯುತ್ತಿದ್ದಂತೆಯೇ ಈ ನಿರ್ದಿಷ್ಟ ಖಾತೆಗಳ ಕುರಿತು ಏನು ಮಾಡಬೇಕೆಂಬ ಕುರಿತು ಅವರಿಂದ ನನಗೆ ಉತ್ತರ ದೊರಕಿರಲಿಲ್ಲ" ಎಂದು ಕಳೆದ ವರ್ಷದ ತನಕ, ಒಟ್ಟು ಮೂರು ವರ್ಷ ಫೇಸ್ಬುಕ್‍ನಲ್ಲಿ ಸೇವೆ ಸಲ್ಲಿಸಿದ್ದ ಝಂಗ್ ಹೇಳಿದ್ದಾರೆ.


"2019ರ ಕೊನೆಯ ಭಾಗದಲ್ಲಿ  ನಾಲ್ಕು ನಕಲಿ ಖಾತೆ ಜಾಲಗಳು ಪತ್ತೆಯಾಗಿದ್ದವು ಅವುಗಳಲ್ಲಿ ಎರಡು ಬಿಜೆಪಿ ಬೆಂಬಲಿತ ಹಾಗೂ ಎರಡು ಕಾಂಗ್ರೆಸ್ ಬೆಂಬಲಿತವಾಗಿದ್ದವು, ಅವುಗಳಲ್ಲಿ ಒಂದು ಬಿಜೆಪಿಗೆ ಸೇರಿದ ಖಾತೆ ಸಹಿತ ಮೂರನ್ನು ತೆಗೆದುಹಾಕಲಾಯಿತು,  ಆದರೆ ನಾಲ್ಕನೆಯದರ ಕುರಿತು ನನಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲ" ಎಂದು ಅವರು ಹೇಳಿದ್ದಾರೆ.

"ಜನವರಿ 2020ರಲ್ಲಿ ನಾವು ಸಾವಿರಾರು ಖಾತೆಗಳನ್ನು ಹೊಂದಿದ ಜಾಲ ಪತ್ತೆಹಚ್ಚಿದ್ದೆವು. ಅದರಲ್ಲಿ ಆಪ್ ಪರ ರಾಜಕೀಯ ಸಂದೇಶಗಳನ್ನು ಬಿಜೆಪಿ ಬೆಂಬಲಿಗರು ಪೋಸ್ಟ್ ಮಾಡುತ್ತಿರುವಂತೆ  ಹಾಗೂ ಪ್ರಧಾನಿ ಮೋದಿಗೆ ಮತ ಹಾಕಿದವರು ಈಗ ಆಪ್‍ಗೆ ಬೆಂಬಲ ನೀಡುತ್ತಿದ್ದಾರೆಂಬ ಆರ್ಥದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಲಾಗಿತ್ತು"‌ ಎಂದೂ ಅವರು ಹೇಳಿದ್ದಾರೆ.

ಆದರೆ ಝಂಗ್ ಅವರ ಹೇಳಿಕೆಗಳನ್ನು ಫೇಸ್ಬುಕ್ ತಿರಸ್ಕರಿಸಿದೆ. 150ಕ್ಕೂ ಅಧಿಕ ನಕಲಿ ಖಾತೆ ಜಾಲಗಳನ್ನು ತೆಗೆದು ಹಾಕಲಾಗಿವೆ. ಪ್ರತಿಯೊಂದು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ನಂತರ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿರುವ ಫೇಸ್ಬುಕ್, ಅದೇ ಸಮಯ ಬಿಜೆಪಿ ಸಂಸದರೊಬ್ಬರಿಗೆ ನಂಟು ಹೊಂದಿದ ಖಾತೆಯನ್ನು ಏಕೆ ತೆಗೆದುಹಾಕಿಲ್ಲ ಎಂಬುದರ ಕುರಿತು ಏನನ್ನೂ ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News