×
Ad

ವಿಮಾ ನೌಕರರ ಸಂಘದ ಸ್ಥಾಪಕ ಸದಸ್ಯ ಬಿ.ಆರ್.ವಿ.ಕಾಮತ್ ನಿಧನ

Update: 2021-10-23 19:11 IST

ಉಡುಪಿ, ಅ.23: ಉಡುಪಿ ವಿಭಾಗದ ವಿಮಾ ನೌಕರರ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರಾದ ಹಿರಿಯ ನಾಯಕ ಬಾರ್ಕೂರು ರತ್ನಾಕರ ವಾಮನರಾಯ ಕಾಮತ್, ಶನಿವಾರ ಬೆಳಗ್ಗೆ ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು. ಬಿಆರ್‌ವಿ ಎಂದೇ ಸಹೋದ್ಯೋಗಿಗಳಿಂದ ಕರೆಸಿಕೊಳ್ಳುತಿದ್ದ ಕಾಮತ್, ಪುತ್ರಿಯನ್ನು ಅಗಲಿದ್ದು ಅವರ ಪತ್ನಿ ನಾಲ್ಕು ತಿಂಗಳ ಹಿಂದೆ ನಿಧನರಾಗಿದ್ದರು.

1956ರಲ್ಲಿ ಜೀವವಿಮಾ ನಿಗಮ ರಾಷ್ಟ್ರೀಕರಣಗೊಂಡು ಉಡುಪಿಯಲ್ಲಿ ವಿಮಾ ನೌಕರರ ಸಂಘ ಸ್ಥಾಪನೆಯಾದಾಗ ಕಾಮತರು ಅದರ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ನಾಲ್ಕು ದಶಕಗಳ ಅವರ ಸೇವಾವಧಿಯಲ್ಲಿ ವಿಮಾ ನೌಕರರರ ಸಂಘ ಉಡುಪಿ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಉಪಾಧ್ಯಕ್ಷ ಮತ್ತು ಅಧ್ಯಕ್ಷರಾಗಿ ಎರಡು ದಶಕಗಳ ಕಾಲ ಸಂಘಟನೆಯ ಬೆವಣಿಗೆಗೆ ಸಕ್ರಿಯವಾಗಿ ದುಡಿದಿದ್ದರು.

1974ರಲ್ಲಿ ಎಲ್‌ಐಸಿಯ ಲಾಕೌಟ್ ಮತ್ತು ದಬ್ಬಾಳಿಕೆ ನೀತಿಯನ್ನು ಪ್ರತಿಭಟಿಸಿ ದೇಶಾದ್ಯಂತ ನೂರಾರು ಕಾರ್ಯಕರ್ತರು ಮತ್ತು ಉಡುಪಿ ವಿಭಾಗದಲ್ಲಿ ಅಮಾನತುಗೊಂಡು ಮತ್ತೆ ಸೇವೆಗೆ ನಿಯುಕ್ತಿಗೊಂಡ ಐವರು ಉದ್ಯೋಗಿಗಳಲ್ಲಿ ಬಿ.ಆರ್.ವಿ.ಕಾಮತರು ಒಬ್ಬರು. ಎಲ್ಲೈಸಿಯಲ್ಲಿ ಹೊಸದಾಗಿ ಕೆಲಸಕ್ಕೆ ಬರುವ ಉದ್ಯೋಗಿಗಳಿಗೆ ನೀಡುತಿದ್ದ ಧೈರ್ಯ, ತೋರುತಿದ್ದ ಪ್ರೀತಿಯ ಮಾರ್ಗದರ್ಶ ಅವರನ್ನು ಜನಪ್ರಿಯರನ್ನಾಗಿಸಿತ್ತು.

50ಕ್ಕಿಂತಲೂ ಅಧಿಕ ಸಲ ತಾವು ಸ್ವತ: ರಕ್ತದಾನ ಮಾಡಿದುದಲ್ಲದೆ, ರಕ್ತದಾನ ಶಿಬಿರವನ್ನೂ ಆಯೋಜಿಸುವುದರಲ್ಲಿ ಬಿ.ಆರ್.ವಿ ಕಾಮತ್ ಎತ್ತಿದ ಕೈಯಾಗಿದ್ದರು. ನಿವೃತ್ತಿಯ ನಂತರವೂ ಅವರು ಉಡುಪಿ ವಿಭಾಗದ ವಿಮಾ ಪಿಂಚಣಿದಾರರ ಸಂಘದ ಖಜಾಂಚಿಯಾಗಿ ಮಾರ್ಗದರ್ಶನ ಮಾಡುತಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News