×
Ad

ಮಂಗಳೂರು: ರೆ. ಡಾ. ಹನಿಬಾಲ್ ರಿಚಾರ್ಡ್ ಕಬ್ರಾಲ್ ನಿಧನ

Update: 2021-10-23 20:23 IST

ಮಂಗಳೂರು, ಅ.23: ಕರ್ನಾಟಕ ದಕ್ಷಿಣ ಸಭಾಪ್ರಾಂತದ (ಸಿಎಸ್‌ಐ ಕೆಎಸ್‌ಡಿ) ಬೋಧಕ ಹಾಗೂ ಮಂಗಳೂರಿನ ಬಲ್ಮಠದಲ್ಲಿರುವ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರೆ.ಡಾ.ಹನಿಬಾಲ್ ರಿಚಾರ್ಡ್ ಕಬ್ರಾಲ್ (66) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ಮಂಗಳೂರಿನ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನಲ್ಲಿ ಬಿ.ಎಡ್. ಪದವಿ, ಬೆಂಗಳೂರಿನ ಯುನೈಟೆಡ್ ಥಿಯೊಲಾಜಿಕಲ್ ಕಾಲೇಜಿನಲ್ಲಿ ಎಂಟಿಎಚ್ ಪದವಿ, ಅಮೇರಿಕಾದ ಪ್ರಿನ್ಸ್‌ಟನ್ ಥಿಯೊಲಾಜಿಕಲ್ ಸೆಮಿನರಿ ಮತ್ತು ಕೊಲ್ಕತ್ತಾದ ಸೆನೆಟ್ ಆಫ್ ಸೆರಾಂಪುರ್‌ ನಲ್ಲಿ ಡಾಕ್ಟರೆಟ್ ಪದವಿಯನ್ನು ಪಡೆದಿದ್ದರು.

1976ರಲ್ಲಿ ಧರ್ಮಗುರು ದೀಕ್ಷೆ ಹಾಗೂ 1980ರಲ್ಲಿ ಬೋಧಕರಾಗಿ ದೀಕ್ಷೆ ಪಡೆದು ಪ್ರಥಮವಾಗಿ ತರೀಕೆರೆ ಚರ್ಚ್‌ನಲ್ಲಿ ಸೇವೆಗೆ ಸೇರ್ಪಡೆಗೊಂಡರು. ಬಳಿಕ ಮೈಸೂರು ಹಾಗೂ ಹಾಸನ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು. ಮಂಗಳೂರು ವೈಎಂಸಿಎಯ ಅಧ್ಯಕ್ಷರಾಗಿದ್ದರು. ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನಲ್ಲಿ ಹಲವು ವರ್ಷ ಪ್ರಾಧ್ಯಾಪಕರಾಗಿ, ನಂತರ 2009ರಿಂದ ಪ್ರಾಂಶುಪಾಲರಾಗಿ ಸುಮಾರು 11 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಕಲಾ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಅವರು, ಬಾನುಲಿ ಕಾರ್ಯಕ್ರಮ, ಸಂವಹನ ಕ್ಷೇತ್ರ, ಶಿಕ್ಷಣ ಕ್ಷೇತ್ರ ಮತ್ತು ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಹೆಸರನ್ನು ಸಂಪಾದಿಸಿದವರು. 800ಕ್ಕೂ ಹೆಚ್ಚು ಹಾಡುಗಳನ್ನು ಕನ್ನಡ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂಯೋಜಿಸಿ ಜನರ ಮೆಚ್ಚುಗೆಯನ್ನು ಗಳಿಸಿದ್ದರು.

ಸಂತಾಪ: ರೆ.ಡಾ. ಹನಿಬಾಲ್ ಕಬ್ರಾಲ್ ಅವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಶಾಸಕ ಯು.ಟಿ. ಖಾದರ್, ಮಾಜಿ ಶಾಸಕ ಜೆ.ಆರ್. ಲೋಬೊ, ಎಸ್. ಪ್ರದೀಪ ಕುಮಾರ ಕಲ್ಕೂರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News