ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು: ರಂಗೇ ಗೌಡ
ಕೋಟ, ಅ. 23: ದೈನಂದಿನ ಜೀವನದಲ್ಲಿ ಯಾವುದೇ ಸಮಸ್ಯೆಗಳು ಹಾಗೂ ಕಾನೂನಿನ ತೊಡಕುಗಳು ಬಂದಾಗ ಜನರು ನ್ಯಾಯಾಲಯಕ್ಕೆ ಬರುವುದು ಅನಿವಾರ್ಯವಾಗುತ್ತದೆ. ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಬೇಕಾದಾಗ ಎಲ್ಲರಿಗೂ ವಕೀಲರ ಶುಲ್ಕ, ಇತ್ಯಾದಿಗಳನ್ನು ಭರಿಸುವ ಆರ್ಥಿಕ ಚೈತನ್ಯ ವಿರುವುದಿಲ್ಲ. ಈ ಕಾರಣಕ್ಕೆ ಯಾರು ಕೂಡ ನ್ಯಾಯ ಪಡೆಯುವುದರಿಂದ ವಂಚಿತರಾಗಬಾರದೆಂಬ ಉದ್ದೇಶದಿಂದಲೇ ಸರಕಾರ ಉಚಿತ ಕಾನೂನು ನೆರವಿನ ವ್ಯವಸ್ಥೆ ಕಲ್ಪಿಸಿದೆ ಎಂದು ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ರಂಗೇ ಗೌಡ ಹೇಳಿದ್ದಾರೆ.
ಕುಂದಾಪುರ ತಾಲೂಕು ಉಚಿತ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಕುಂದಾಪುರ, ತಾಪಂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕೋಟತಟ್ಟು ಗ್ರಾಪಂಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕೋಟ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ನಿರಂಜನ್ ಹೆಗ್ಡೆ ಸಭಾಧ್ಯಕ್ಷತೆ ವಹಿಸಿದ್ದರು. ವಕೀಲೆ ಅಂಜಲಿ ಹುಂಡೆಕರ್ ಮಹಿಳೆಯರ ವಿರುದ್ಧದ ಅಪರಾಧ ಮತ್ತು ಸಂತ್ರಸ್ತರ ಪರಿಹಾರ ನಿಯಮಗಳನ್ನು ವಿವರಿಸಿದರು. ಕೋಟ ಠಾಣಾಧಿ ಕಾರಿ ಸಂತೋಷ್ ಬಿ.ಪಿ. ಪರವಾನಿಗೆ ರಹಿತ ವಾಹನ ಚಾಲನೆ, ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಇತ್ಯಾದಿಗಳ ಗಂಭೀರ ದುಷ್ಪರಿಣಾಮಗಳನ್ನು ವಿವರಿಸಿದರು.
ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್, ಥೀಮ್ ಪಾರ್ಕ್ ಟ್ರಸ್ಟಿ ಸುಬ್ರಾಯ ಆಚಾರ್ಯ, ಕೋಟ ವಲಯದ ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಉಪಸ್ಥಿತರಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಎಚ್. ಪ್ರಮೋದ್ ಹಂದೆ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ ಎಸ್. ಪೂಜಾರಿ ವಂದಿಸಿದರು.