ಉಡುಪಿ ಜಿಲ್ಲೆಯಾದ್ಯಂತ 1-5ನೇ ತರಗತಿ ಆರಂಭಕ್ಕೆ ಸಿದ್ಧತೆ
ಉಡುಪಿ, ಅ.23: ಜಿಲ್ಲೆಯಾದ್ಯಂತ ಅ.25ರಿಂದ ಒಂದರಿಂದ ಐದನೇ ತರಗತಿ ಗಳು ಪ್ರಾರಂಭವಾಗುತ್ತಿದ್ದು, ಇದಕ್ಕೆ ಬೇಕಾದ ಹಲವು ಶೈಕ್ಷಣಿಕ, ಭೌತಿಕ, ಆರೋಗ್ಯ, ಶಾಲಾ ಸ್ವಚ್ಚತೆ, ಊಟದ ತಯಾರಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಂದರಿಂದ ಐದನೇ ತರಗತಿವರೆಗಿನ ಸರಕಾರಿ 220(ದಾಖಲಾತಿ- 29861 ವಿದ್ಯಾರ್ಥಿಗಳು), ಅನುದಾನಿತ 6(8747), ಖಾಸಗಿ 15(38056)ಮತ್ತು ಇತರ 8(277) ಸೇರಿದಂತೆ ಒಟ್ಟು 249 ಶಾಲೆಗಳಿವೆ.
ಅ.21ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ನೀಡಿದ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.100ರಷ್ಟು ಶಿಕ್ಷಕರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಸಾಮಾಜಿಕ ಅಂತರ ಪಾಲಿಸಿ, 20 ವಿದ್ಯಾರ್ಥಿಗಳ ಸಣ್ಣ ಗುಂಪು ಮಾಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.
ಮಾಸ್ಕ ಕಡ್ಡಾಯ ಮಾಡಲಾಗಿದ್ದು, ಎಲ್ಲ ಶಾಲೆಗಳ ಎಲ್ಲಾ ತರಗತಿ ಕೊಠಡಿ ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಎಲ್ಲ ಶಾಲಾ ಮುಖ್ಯಗುರುಗಳ ಸಭೆ ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಮಾಡಿ ಅಗತ್ಯ ಸೂಚನೆ ನೀಡಿ ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ಕಾಳಜಿ ಮಾಡಲು ಸೂಚಿಸಲಾಗಿದೆ. 1-5ನೆಯ ತರಗತಿ ಮಕ್ಕಳಿಗೆ ಅಕ್ಟೋಬರ್ ಅಂತ್ಯದವರೆಗೆ ಅರ್ಧ ದಿನದ ತಗರಗತಿಗಳ ಶಾಲೆ ನಡೆಸಲಾಗುತ್ತದೆ. ನ.2ರಿಂದ ಪೂರ್ಣ ದಿನ ಶಾಲೆ ನಡೆಸಲಾಗುತ್ತಿದೆ.
500ಕ್ಕೂ ಹೆಚ್ಚು ವುದ್ಯಾರ್ಥಿಗಳಿರುವ 8(ಪ್ರಾಥಮಿಕ-2 ಮತ್ತು ಪ್ರೌಢ-6) ಶಾಲೆಗಳು ಮಾತ್ರ ಜಿಲ್ಲೆಯಲ್ಲಿವೆ. ಇಂತಹ ಶಾಲೆಗಳಲ್ಲಿ ಕಾರಿಡಾರ್ ಬಳಸಲು ಮತ್ತು ಸಾಮಾಜಿಕ ಅಂತರ ಕಡ್ಡಾಯ ಪಾಲನೆಗಾಗಿ ಸರದಿ ಮೇರೆಗೆ ಶಾಲೆ ನಡೆಸಲು ತಿಳಿಸಿದೆ. ಶಾಲಾ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಎಲ್ಲಾ ಮೆಲ್ವಿಚಾರಣಾಧಿಕಾರಿಗಳು ವಾರದಲ್ಲಿ ಐದು ಶಾಲೆಗಳಿಗೆ ಭೇಟಿ ನೀಡಲು ಆದೇಶ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭೌತಿಕ ಹಾಜರಾತಿ ಕಡ್ಡಾಯ ಅಲ್ಲ
ಪಾಲಕರು ತಮ್ಮ ಮಕ್ಕಳನ್ನು ಕಳಿಸಲು ಒಪ್ಪದಿದ್ದರೆ, ಅಂತಹ ಮಕ್ಕಳಿಗೆ ಆನ್ಲೈನ್ ಬೋಧನೆ ಮಾಡಲಾಗುತ್ತದೆ. ಭೌತಿಕ ಹಾಜರಾತಿ ಕಡ್ಡಾಯ ಇರುವುದಿಲ್ಲ ಎಂಬುದನ್ನು ತಿಳಿಸಲಾಗಿದೆ. ಪಾಲಕರ ಒಪ್ಪಿಗೆ ಪಡೆದು ಮಕ್ಕಳನ್ನು ಶಾಲೆಗೆ ಕರೆತರಲಾಗು ತ್ತದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.
ತೀವ್ರ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂಡಿಸದಿರಲು ಕಟ್ಟೆಚ್ಚರ ವಹಿಸಲಾಗಿದೆ. ಕಲಿಕೆಯಲ್ಲಿ ಅತ್ಯಂತ ಹಿಂದುಳಿದ ಮಕ್ಕಳನ್ನು ಗುರುತಿಸಿ ಅಂಥವರಿಗೆ ಸೇತುಬಂಧ ನಡೆಸಿ ಅವರ ಕಲಿಕಾ ಕೊರತೆ ಗಳನ್ನು ಗುರುತಿಸಿ ಪೂರಕ ಬೋಧನೆ ಮಾಡಲು ತಿಳಿಸಿದೆ ಎಂದು ಅವರು ಹೇಳಿದ್ದಾರೆ.