ಬಾಂಗ್ಲಾ ಹಿಂಸಾಚಾರ: ಮತ್ತೊಬ್ಬ ಶಂಕಿತ ಆರೋಪಿ ಬಂಧನ

Update: 2021-10-23 17:36 GMT

 ಢಾಕಾ,ಅ.23: ಬಾಂಗ್ಲಾದೇಶದಲ್ಲಿ ನವರಾತ್ರಿ ಹಬ್ಬದ ಸಮಯದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹಿಂಸಾಚಾರ ನಡೆಸಿದ ಹಾಗೂ ದೇವಾಲಯಗಳ ಮೇಲೆ ಗುಂಪುದಾಳಿಗಳನ್ನು ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿ ಎರಡನೆ ಪ್ರಮುಖ ಶಂಕಿತ ಆರೋಪಿಯನ್ನು ಭದ್ರತಾ ಏಜೆನ್ಸಿಗಳು ಶನಿವಾರ ಬಂಧಿಸಿವೆ.

ವಾಯವ್ಯ ರಂಗಪುರ ಜಿಲ್ಲೆಯ ಪೀರ್ಗಂಜ್ ಉಪಜಿಲ್ಲೆಯಲ್ಲಿ ಅಕ್ಟೋಬರ್ ನಡೆದ ಹಿಂಸಾಚಾರದ ಪ್ರಮುಖ ಸೂತ್ರಧಾರಿಗಳಲ್ಲೊಬ್ಬ ಯನ್ನಲಾದ ಶೈಖತ್ ಮೊಂಡಲ್ ಹಾಗೂ ಆತನ ಸಹಚರನನ್ನು ಢಾಕಾದ ಹೊರವಲಯದಲ್ಲಿರುವ ಗಾಝಿಪುರದಲ್ಲಿ ಶನಿವಾ ಬಂಧಿಸಲಾಗಿದೆಯೆಂದು ಅಪರಾಧ ನಿಗ್ರಹಕ್ಕಾಗಿನ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ (ಆರ್ಎಬಿ)ನ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಮೊಂಡಲ್ ಫೇಸ್‌ಬುಕ್ ನಲ್ಲಿ ಕೋಮುದ್ವೇಷದ ಭಾಷಣದ ಮೂಲಕ ಜನರನ್ನು ಪ್ರಚೋದಿಸುವ ಮೂಲಕ ಹಿಂಸೆಯ ಕಿಡಿ ಹೊತ್ತಿಸಿದ್ದಾನೆಂದು ಆರ್ಎಬಿ ಅಧಿಕಾರಿಗಳು ತಿಳಿಸಿದ್ದಾರೆ.

ಮೊಂಡಲ್ ಅಕ್ಟೋಬರ್ 17ರಂದು ತನ್ನ ಭಾಷಣವನ್ನು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ ಬಳಿಕ ಪೀರ್ಗಂಜ್ನಲ್ಲಿ ಹಿಂಸಾಚಾರ ಭುಗಿಲೆದ್ದು ಹಿಂದೂಗಳಿಗೆ ಸೇರಿದ 70ಕ್ಕೂ ಅಧಿಕ ಮನೆಗಳು ಹಾಗೂ ಅಂಗಡಿಳಿಗೆ ಗಲಭೆಕೋರರು ಬೆಂಕಿ ಹಚ್ಚಿದ್ದರು.

 ಪ್ರಕರಣದ ಪ್ರಮುಖ ಆರೋಪಿ ಇಕ್ಬಾಲ್ ಹುಸೇನ್ ಆನ್ನು ಶುಕ್ರವಾರ ಕಾಕ್ಸ ಬಝಾರ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು. ಈತ ಕುಮಿಲ್ಲಾ ಎಂಬಲ್ಲಿರುವ ದುರ್ಗಾ ಪೂಜಾದ ಪೆಂಡಾಲ್ ನಲ್ಲಿ ಕುರ್ ಆನ್ ಗ್ರಂಥವನ್ನು ಇರಿಸಿದ್ದನೆಂದು ಆರೋಪಿಸಲಾಗಿದೆ.

ಬಾಂಗ್ಲಾದ ವಿವಿಧೆಡೆ ನವರಾತ್ರಿ ಹಬ್ಬದ ಸಂದರ್ಭ ಹಿಂದೂಗಳ ಮೇಲೆ ನಡೆದ ಹಿಂಸಾಚಾರ ಹಾಗೂ ಧಾರ್ಮಿಕ ಸ್ಥಳಗಳ ಮೇಲೆ ನಡೆದ ದಾಳಿ ಪ್ರಕರಣಗಳಿಗೆ ಸಂಬಂಧಿಸಿಈವರೆಗೆ 600ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಕೆರಳಿಸಿದ ಆರೋಪದಲ್ಲಿ ಮುಹಮ್ಮದ್ ಫಯಾಝ್ ಎಂಬಾತನ ವಿರುದ್ಧ ಬಾಂಗ್ಲಾದೇಶ ಡಿಜಿಟಲ್ ಭದ್ರತಾ ಕಾಯ್ದೆ (ಡಿಜಿಎಸ್ಎ)ಯನ್ನು ಹೇರಲಾಗಿದೆ ಎಂದು ಡೈಲಿ ಸ್ಟಾರ್ ಸುದ್ಪಿಪತ್ರಿಕೆ ವರದಿ ಮಾಡಿದೆ.

 ಈ ಮಧ್ಯೆ ಹಿಂಸಾಚಾರವನ್ನು ಖಂಡಿಸಿ ಕೇಂದ್ರ ಢಾಕಾದ ಶಾಭಾಗ್ ಪ್ರದೇಶದಲ್ಲಿ ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರೈಸ್ತ ಏಕತಾ ಮಂಡಳಿಯ ಆಶ್ರಯದಲ್ಲಿ ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಶನಿವಾರ ನಿರಶನ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News