ಅಮಿತ್‌ ಶಾ ಜಮ್ಮುಕಾಶ್ಮೀರ ಭೇಟಿ: ನೂರಕ್ಕೂ ಹೆಚ್ಚು ಮಂದಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನ

Update: 2021-10-24 09:42 GMT
ಸಾಂದರ್ಭಿಕ ಚಿತ್ರ

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಅವರ ಭೇಟಿಗೂ ಮುನ್ನವೇ ಜಮ್ಮುಕಾಶ್ಮೀರದಲ್ಲಿ ನೂರಾರು ಜನರನ್ನು ಬಂಧಿಸಲಾಗಿದೆ ಹಾಗೂ ಅವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ Scroll.in ಸೇರಿದಂತೆ ಮಾಧ್ಯಮ ವರದಿಗಳು ತಿಳಿಸಿವೆ.

ಸುಮಾರು 700 ಜನರನ್ನು ಬಂಧಿಸಲಾಗಿದೆ ಎಂದು ದಿ ಹಿಂದೂ ಶುಕ್ರವಾರ ವರದಿ ಮಾಡಿದೆ, ಆದರೆ ಇಂಡಿಯನ್ ಎಕ್ಸ್‌ಪ್ರೆಸ್ ಭಾನುವಾರ ಪ್ರಕಟಿಸಿದ ವರದಿಯಲ್ಲಿ 900 ಬಂಧನಗಳ ಸಂಖ್ಯೆಯನ್ನು ಉಲ್ಲೇಖಿಸಿದೆ.

ಶಾ ಶನಿವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದು, ಅವರ ಭೇಟಿಯ ಪೂರ್ವಭಾವಿಯಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಡ್ರೋನ್‌ಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೋಟರ್‌ಬೋಟ್‌ಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು.

ಬಂಧಿತರಲ್ಲಿ ಹಲವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯೂ ಆರೋಪ ಹೊರಿಸಲಾಗಿತ್ತು. ಕಳೆದ ವಾರವೊಂದರಲ್ಲೇ ಸುಮಾರು 50 ಜನರನ್ನು ಕಾಯ್ದೆಯಡಿ ಬಂಧಿಸಲಾಗಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಾಯಿದೆಯಡಿಯಲ್ಲಿ, ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೆಂದು ಆರೋಪಿಸಿದರೆ ಎರಡು ವರ್ಷಗಳವರೆಗೆ ಅಥವಾ "ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ" ಗಾಗಿ ಕಾಯ್ದಿರಿಸಲ್ಪಟ್ಟರೆ ಒಂದು ವರ್ಷದವರೆಗೆ ವ್ಯಕ್ತಿಗಳನ್ನು ವಿಚಾರಣೆಯಿಲ್ಲದೆ ಬಂಧಿಸಬಹುದು ಎಂದು ವರದಿಗಳು ತಿಳಿಸಿವೆ.

ಈ ಕ್ರಮವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News